ಮಕ್ಕಳನ್ನು ಸರಕಾರಿ ಶಾಲೆಗಳತ್ತ ಸೆಳೆಯಿರಿ
‘ಮಕ್ಕಳು ಶಾಲೆಗೆ ಬರುವುದು ಕಲಿಯುವುದಕ್ಕೆ ಹೊರತು, ಶೂ ಸಾಕ್ಸ್ ಹಾಕಿಕೊಳ್ಳುವುದಕ್ಕೆ ಅಲ್ಲ’ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ಅವರ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ.
ಈಗಾಗಲೇ ಇಂಗ್ಲಿಷ್ ಮಾಧ್ಯಮ ಶಾಲೆಗಳ ಹಾವಳಿ ಹೆಚ್ಚಾಗಿದ್ದು, ಕನ್ನಡ ಶಾಲೆಗಳಿಗೆ ಸೇರುವ ಮಕ್ಕಳು ಕಡಿಮೆಯಾಗುತ್ತಿದ್ದಾರೆ. ಕಾನ್ವೆಂಟ್ ಸ್ಕೂಲಿಗೆ ಹೋಗುವ ಮಕ್ಕಳು ಶುಭ್ರ ಬಟ್ಟೆ, ಟೈ, ಕಾಲಿಗೆ ಶೂ, ಸಾಕ್ಸ್ ಹಾಕಿಕೊಂಡು ನಡೆದಾಡುವುದನ್ನು ನೋಡಿದಾಗ ಅದೇ ಬೀದಿಯಲ್ಲಿ, ಅದೇ ಹಳ್ಳಿಯಲ್ಲಿ ಆಟವಾಡುವ ಬಡವರ ಮಕ್ಕಳು ಬರಿಗಾಲಲ್ಲಿ, ಹರಿದ ಬಟ್ಟೆ ಹಾಕಿಕೊಂಡು ಶಾಲೆಗೆ ಹೋಗಬೇಕೆ? ನಮ್ಮ ಮಕ್ಕಳು ಶೂ, ಸಾಕ್ಸ್ ಹಾಕಿಕೊಂಡು ಟಿಪ್‌ಟಾಪ್ ಆಗಿ ಶಾಲೆಗೆ ಹೋಗಲಿ ಎಂಬ ಕಾರಣಕ್ಕೇ ಅನೇಕ ಪಾಲಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸುತ್ತಿದ್ದಾರೆ.
ಇಂತಹ ಇಂಗ್ಲಿಷ್ ಶಾಲೆಗಳಿಗೆ ಸ್ಪರ್ಧೆಯೊಡ್ಡಿ ಮಕ್ಕಳನ್ನು ಕನ್ನಡ ಶಾಲೆಗಳತ್ತ ಸೆಳೆಯ ಬೇಕಾದರೆ ಶೂ, ಸಾಕ್ಸ್ ಅವಶ್ಯವೇ ಎಂಬುದನ್ನು ಶಿಕ್ಷಣ ಸಚಿವರು ತಿಳಿದುಕೊಳ್ಳಬೇಕು. ಅಷ್ಟಕ್ಕೂ ಯಾವೊಬ್ಬ ಸಚಿವ, ಶಾಸಕರು ತಮ್ಮ ಕೈಯಿಂದ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸು ವುದಿಲ್ಲವಲ್ಲ, ಜನರು ಕಟ್ಟಿದ ತೆರಿಗೆ ದುಡ್ಡಿನಲ್ಲಿ ಜನರಿಗೇ ಸೌಲಭ್ಯಗಳನ್ನು ಕೊಡಲು ಏನು ಸಮಸ್ಯೆ? ಶಿಕ್ಷಣ ಸಚಿವರು ಮಕ್ಕಳ ಕಲ್ಯಾಣಕ್ಕಾಗಿ ಇರುವ ಎಲ್ಲ ಯೋಜನೆ ಗಳನ್ನು ಮುಂದುವರಿಸಬೇಕು.
ಶೂ, ಸಾಕ್ಸ್, ಸೈಕಲ್, ಹಾಲು, ಸಮವಸ್ತ್ರ, ಪುಸ್ತಕ, ವ್ಯವಸ್ಥಿತ ಕೊಠಡಿಗಳನ್ನು ಎಲ್ಲ ಶಾಲೆಗಳಿಗೂ ಒದಗಿಸಲು ಪ್ರಯತ್ನ ಮಾಡಬೇಕು. ಪ್ರವಾಹ, ಅತಿವೃಷ್ಟಿಯಿಂದ ಹಾನಿಯಾದ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಿಸಬೇಕು. ಅನೇಕ ಶಾಲೆಗಳಲ್ಲಿ ಎರಡು ಮೂರು ತರಗತಿಗಳಿಗೆ ಒಬ್ಬೊಬ್ಬರೇ ಶಿಕ್ಷಕರಿದ್ದಾರೆ ಎಂಬ ವರದಿಗಳು ನಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. ಆದ್ದರಿಂದ ಶೀಘ್ರದಲ್ಲಿ ಖಾಲಿಇರುವ ಎಲ್ಲ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಇಚ್ಛಾ ಶಕ್ತಿ ಪ್ರದರ್ಶಿಸಬೇಕು.
ರಾಜ್ಯದಲ್ಲಿ 14 ವರ್ಷದ ಒಳಗಿನ 10.12 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಇದನ್ನು ಗಂಭೀರ ವಾಗಿ ಪರಿಗಣಿಸಿ, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಯತ್ತ ಸೆಳೆಯಲು ಕ್ರಮ ಕೈಗೊಳ್ಳಬೇಕು.