ಫಸಲ್ ಬಿಮಾ: ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಿ
ರೈತರಿಗೆ ವರದಾನ ಆಗಿರುವ ಕೆಲವೇ ಯೋಜನೆಗಳಲ್ಲಿ ಫಸಲು ಬಿಮಾ ಯೋಜನೆ ಸಹ ಒಂದು. ಆದರೆ ಅಂತಹ ಮಹತ್ವದ ಯೋಜನೆ ಅಡಿಯಲ್ಲೂ ರಾಜ್ಯದ ಉದ್ದಗ ಲಕ್ಕೂ ರೈತರಿಗೆ ವಂಚನೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ.
ರೈತರಿಗೆ ನೆಮ್ಮದಿಯ ಬದುಕು ಕಟ್ಟಿಕೊಡ ಬೇಕಾದ ಯೋಜನೆಯಲ್ಲೂ ಮಧ್ಯವರ್ತಿಗಳ ಉಪಟಳವೇ ಹೆಚ್ಚಾಗಿರುವುದು ಆಡಳಿತ ವ್ಯವಸ್ಥೆಯಲ್ಲಿನ ಲೋಪ. ಕೆಲವು ಕಡೆ ಮಧ್ಯವರ್ತಿಗಳು ಪರಿಹಾರದ ಹಣವನ್ನು ಲಪಟಾಯಿಸಿದರೆ, ಇನ್ನು ಕೆಲವೆಡೆ ಯಾರದ್ದೇ ಜಮೀನಿನ ಬೆಳೆಗೆ ವಿಮೆ ತುಂಬಿ, ತಮ್ಮ ಬ್ಯಾಂಕ್ ಖಾತೆಗೆ ಹಣ ಇಳಿಸಿಕೊಳ್ಳುತ್ತಿದ್ದಾರೆ.
ಮತ್ತೊಂದೆಡೆ, ಏನನ್ನೂ ಬೆಳೆಯದ ಹೊಲದಲ್ಲಿ ಬೆಳೆ ಬೆಳೆದಿರುವುದಾಗಿ ದಾಖಲೆ ಸೃಷ್ಟಿಸಿ ವಿಮೆ ಪಡೆಯುತ್ತಿದ್ದಾರೆ. ತಾಂತ್ರಿಕ ತೊಂದರೆ ಯಿಂದ ರೈತರಿಗೆ ಸರಿಯಾದ ರೀತಿಯಲ್ಲಿ ವಿಮೆ ಪರಿಹಾರವೂ ಲಭಿಸುತ್ತಿಲ್ಲ. ಒಟ್ಟಾರೆ ಫಸಲ್ ಬಿಮಾ ಯೋಜನೆ ನಿರ್ವಹಣೆಯಲ್ಲಿ ಸಾಕಷ್ಟು ಅಡ್ಡಿ, ಆತಂಕಗಳು ಎದುರಾಗಿವೆ. ಈ ಕುರಿತು ರೈತ ಮುಖಂಡರು, ಮಾಧ್ಯಮಗಳು ಕೃಷಿ ಸಚಿವರ ಗಮನಕ್ಕೆ ತರಲಾಗಿದ್ದರೂ ವಂಚನೆ ಎಸಗಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ.
‘ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. ಅಧಿಕಾರಿಗಳು ಸಹ ಇದರಲ್ಲಿ ಪರೋಕ್ಷವಾಗಿ ಭಾಗಿಯಾಗಿರುವುದು ಗಮನಕ್ಕೆ ಬಂದರೂ ಮೌನ ವಹಿಸಿದ್ದಾರೆ. ಮಧ್ಯವರ್ತಿಗಳ ಹಾವಳಿಗೂ ಬ್ರೇಕ್ ಹಾಕಿಲ್ಲ. ಸುಳ್ಳು ದಾಖಲೆಗಳ ಸೃಷ್ಟಿಗೆ ಕಡಿವಾಣ ಹಾಕಿಲ್ಲ. ಮಧ್ಯವರ್ತಿಗಳು ಹಾಗೂ ಅಧಿಕಾರಿಗಳ ಮಧ್ಯೆ ರೈತರು ನಷ್ಟ ಅನುಭವಿಸುವುದು ಮಾತ್ರ ನಿಂತಿಲ್ಲ.ಆದ್ದರಿಂದ ಫಸಲ್ ಬಿಮಾ ಯೋಜನೆಯ ನಿರ್ವಹಣೆ, ಅಕ್ರಮ ತಡೆಯುವುದಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರವು ಒಂದು ವಿಶೇಷ ತಂಡ ರಚಿಸಬೇಕು. ಅಕ್ರಮ ಎಸಗುವವರನ್ನು ಪತ್ತೆ ಹಚ್ಚಿ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೂಡಲೇ ಸರಕಾರ ಬೆಳೆ ವಿಮೆ ಯೋಜನೆ ಪಾರದರ್ಶಕ ಜಾರಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲು ಪ್ರತ್ಯೇಕವಾದ ಸಮಿತಿಯೊಂದನ್ನು ರಚಿಸಬೇಕು.
ಎಲ್ಲ ರೀತಿಯ ಮಾಹಿತಿ ಮತ್ತು ದಾಖಲೆಗಳನ್ನು ನೇರವಾಗಿ ರೈತರಿಂದ ಪಡೆದು ರೈತರಿಗೆ ವಿಮಾ ಸೌಲಭ್ಯವನ್ನು ಪಾರದರ್ಶಕವಾಗಿ ರೈತರಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು.