ಪ್ರವಾಹ: ಕೇಂದ್ರ ನೆರವಿಗೆ ಬರಲಿ
ಕಳೆದ ೧೦ ದಿನಗಳಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನೂರಾರು ಮನೆಗಳು ಧರೆಗುರುಳಿವೆ. ಹಲವೆಡೆ ಜೀವ ಹಾನಿಯಾ ಗಿವೆ. ಹೊಲ ಗದ್ದೆಗಳು ಜಲಾವೃತಗೊಂಡು ಕೈಗೆ ಬಂದ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ರಾಜ್ಯದ ಬಹುತೇಕ ತಾಲೂಕುಗಳಲ್ಲಿಜನಜೀವನ ಅಸ್ತವ್ಯಸ್ತವಾಗಿದೆ.
ಇಂತಹ ಸಂದರ್ಭದಲ್ಲಿ ಪರಿಹಾರಕ್ಕಾಗಿ ಜನರು ಸರಕಾರದ ಕಡೆಗೆ ನೋಡುತ್ತಿದ್ದಾರೆ. ಆದರೆ ರಾಜ್ಯ ಸರಕಾರವು ಮನೆಗಳಿಗೆ ಹಾನಿಯಾದದ್ದಕ್ಕೆ ಕೇವಲ ೧೦ ಸಾವಿರ ರುಪಾಯಿ ಘೋಷಣೆ ಮಾಡಿದ್ದಾರೆ. ಇದರಿಂದ ಸಂತ್ರಸ್ತರು ಸಹಜವಾಗಿಯೇ ಬೇಸರಗೊಂಡಿದ್ದಾರೆ. ಹತ್ತು ಸಾವಿರ ರುಪಾಯಿಯಿಂದ ಮನೆಯ ಒಂದು ಗೋಡೆಯನ್ನು ಮತ್ತೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ರಾಜ್ಯ ಸರಕಾರವು ಕೂಡಲೇ ಮನೆಗಳಿಗೆ ಹಾನಿಯಾದ ಕುಟುಂಬಗಳಿಗೆ ಪುನಃ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುವಷ್ಟು ಪರಿಹಾರ ಬಿಡುಗಡೆ ಮಾಡಬೇಕು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕೇಂದ್ರ ಸರಕಾರವು ರಾಜ್ಯದನೆರವಿಗೆ ಬಂದು, ಪರಿಹಾರ ಕಾರ್ಯಕ್ಕಾಗಿ ಹಣ ಬಿಡುಗಡೆ ಮಾಡಬೇಕು.
ಕೂಡಲೇ ರಕ್ಷಣಾ ಕಾರ್ಯಕ್ಕೆ ಇನ್ನಷ್ಟು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಬೇಕು. ಸಂತ್ರಸ್ತರಿಗಾಗಿ ಆಶ್ರಯ ಕೇಂದ್ರಗಳನ್ನು ತೆರೆಯಬೇಕು. ಜಾನುವಾರುಗಳಿಗೆ ಮೇವು, ಆಶ್ರಯ ನೀಡುವಲ್ಲೂ ಗಮನಹರಿಸುವಂತೆಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಯಾ ಕ್ಷೇತ್ರಗಳ ಶಾಸಕರು ಪ್ರವಾಹಪೀಡಿತ ಕ್ಷೇತ್ರಗಳಿಗೆ ಭೇಟಿ ನೀಡಿ, ಸಂತ್ರಸ್ತರ ಕಷ್ಟ ಆಲಿಸಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲೇ ಅತಿ ಹೆಚ್ಚು ಮಳೆಯಾಗಿರುವುದರಿಂದ ಅಲ್ಲಿ ಬಹಳಷ್ಟು ಹಾನಿಯಾಗಿದ್ದು, ಆ ಜಿಗಳನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಪ್ರವಾಹ ಪೀಡಿತ ಪ್ರದೇಶಗಳಿಗೆ ಸ್ವತಃ ಸಿಎಂ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಬೇಕಿದೆ. ಕೊಡಗು, ವಿಜಯಪುರ ಜಿಲ್ಲೆಗಳ ಕೆಲ ಗ್ರಾಮಗಳಲ್ಲಿ ಭೂಕಂಪನವೂ ಸಂಭವಿಸಿದ್ದು, ಅಲ್ಲಿನ ಜನರು ಆತಂಕಗೊಂಡಿ ದ್ದಾರೆ. ಕೂಡಲೇ ಸರಕಾರ ಅಲ್ಲಿನ ಜನರನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಮಳೆಯಿಂದಾಗಿ ಸಾಂಕ್ರಾಮಿಕ ಕಾಯಿಲೆಗಳ ಪ್ರಮಾಣವೂ ಹೆಚ್ಚುತ್ತಿದ್ದು, ಜನರಿಗೆ ಆಸ್ಪತ್ರೆಗಳಲ್ಲಿ ಸುಲಭವಾಗಿ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳ ಬೇಕಿದೆ.