ಜಾಗ ಖಾತೆ ಅಭಿಯಾನ ವಿಸ್ತರಣೆಯಾಗಲಿ
ದಾನಿಗಳು ನೀಡಿದ ಜಾಗವನ್ನು ಸರಕಾರಿ ಶಾಲೆ ಹೆಸರಿಗೆ ದಾಖಲೀಕರಣ ಮಾಡುವ ಅಭಿಯಾನ ಚಿಕ್ಕಮಗಳೂರು ಜಿಲ್ಲೆಯಲ್ಲಿಶುರುವಾಗಿದ್ದು ಸ್ವಾಗತಾರ್ಹ. ಹೀಗೇ ಈ ಅಭಿಯಾನವು ಇಡೀ ರಾಜ್ಯದ ತುಂಬೆ ಜಾರಿಯಾಗಬೇಕಿದೆ.
ಹತ್ತಾರು ವರ್ಷಗಳ ಹಿಂದೆ ಸರಕಾರಿ ಶಾಲೆ, ಆಸ್ಪತ್ರೆ ಸೇರಿದಂತೆ ಮತ್ತಿತರ ಸರಕಾರಿ ಕಟ್ಟಡಗಳಿಗೆ ಗ್ರಾಮಸ್ಥರು ದಾನ ನೀಡಿದ ಜಾಗ, ಹೊಲ, ಕಣ ಮುಂತಾದ ಭೂಪ್ರದೇಶ ವನ್ನು ಈಗ ಆ ವಂಶದ ಕುಡಿಗಳು ವಶಪಡಿಸಿಕೊಳ್ಳಲು ಮುಂದಾಗುತ್ತಿವೆ. ಇದರಿಂದ ಅನೇಕ ಗ್ರಾಮಗಳಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಶಿಕ್ಷಣ, ಸೌಲಭ್ಯಗಳಿಂದ ವಂಚಿತ ರಾಗುತ್ತಿದ್ದಾರೆ.
ಅಂದಿನ ದಿನಗಳಲ್ಲಿ ಕಾಯಿದೆ, ಕಾನೂನಿಗಿಂತ ಮಾತಿನ ಮೇಲೆಯೇ ನಂಬಿಕೆ ಹೊಂದಿದ್ದ ಜನರು ಬಾಯಿಮಾತಿನಲ್ಲೇ ಜಮೀನುಗಳನ್ನು ದಾನ ಮಾಡಿದ್ದಾರೆ. ಹಾಗೆ ದಾನ ಮಾಡಿದ ಜಮೀನುಗಳ ಪಹಣಿ ಪತ್ರಗಳಲ್ಲಿ ಆ ಕುಟುಂಬಸ್ಥರ ಹೆಸರುಗಳೇ ಮುಂದುವರಿದಿವೆ. ಈಗ ಆ ಕುಟುಂಬಗಳ ಜನರು ಶಾಲೆಗಳನ್ನು ತೆರವು ಮಾಡುವಂತೆ ಶಾಲಾ ಆಡಳಿತ ಮಂಡಳಿಗೆ ಧಮ್ಕಿ ಹಾಕುತ್ತಿರುವ ಘಟನೆಗಳು ನಡೆಯುತ್ತಿವೆ. ರಾಣೇ ಬೆನ್ನೂರು ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದಲ್ಲಿ ಸೋಮವಾರ ಇಂತಹ ದ್ದೊಂದು ಘಟನೆ ನಡೆದಿದೆ.
೫೦ವರ್ಷಗಳ ಹಿಂದೆ ಗ್ರಾಮದ ಶ್ರೀಮಂತ ಕುಟುಂಬವೊಂದು ಶಾಲಾ ಕಟ್ಟಡಕ್ಕೆ ಭೂಮಿಯನ್ನು ದಾನ ಮಾಡಿದ್ದರು. ಇದೀಗ ಆ ಕುಟುಂಬ ದವರು ಜಮೀನು ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದ್ದಲ್ಲದೇ, ಶಾಲೆಗಳಲ್ಲಿ ವಿದ್ಯಾರ್ಥಿಗಳು ಇರುವಾಗಲೇ ಶಾಲಾ ಕಟ್ಟಡವನ್ನು ಕೆಡವಿ ದ್ದಾರೆ. ಇದರಿಂದ ವಿದ್ಯಾರ್ಥಿಗಳು ಆವರಣದಲ್ಲೇ ಕುಳಿತು ಕಲಿಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಅನೇಕ ಗ್ರಾಮ ಗಳಲ್ಲಿ ಸರಕಾರ ಆಸ್ಪತ್ರೆ, ಅಂಗನವಾಡಿ, ಶಾಲೆ-ಕಾಲೇಜುಗಳಿಗೆ ಹಿರಿಯರು ಭೂಮಿಯನ್ನು ದಾನ ಮಾಡಿದ್ದಾರೆ.
ಇದೀಗ ಆ ಜಾಗಗಳ ಮೇಲೆ ಸ್ಥಳೀಯರು ಹಕ್ಕು ಸಾಧಿಸಲು ಪ್ರಯತ್ನಿಸುವ ಕುರಿತು ಪ್ರತಿ ದಿನ ವರದಿಯಾಗುತ್ತಲೇ ಇವೆ. ಇಂತಹ ಅನೇಕ ಪ್ರಕರಣಗಳು ರಾಜ್ಯದ ಮೂಲೆಮೂಲೆಗಳಲ್ಲೂ ಇವೆ. ಆದ್ದರಿಂದ ದಾನಿಗಳು ನೀಡಿದ ಜಾಗವನ್ನು ಸರಕಾರಿ ಶಾಲೆ ಹೆಸರಿಗೆ ದಾಖಲೀ ಕರಣ ಮಾಡುವ ಪ್ರಕ್ರಿಯೆ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆಯಾಗಲಿ. ಇದೊಂದು ಪ್ರಮುಖ ಅಭಿಯಾನವಾಗಲಿ, ದಾನಿಗಳು ಸದುದ್ದೇಶದಿಂದ ನೀಡಿದ ಭೂದಾನ ಸರ್ವತೋಮುಖ ಶೈಕ್ಷಣಿಕ ಅಭಿವೃದ್ಧಿಗೆ ಸದ್ವಿನಿಯೋಗವಾಗಲಿ.