ಸುರಕ್ಷತೆಗೆ ತುರ್ತು ಕ್ರಮ ಅಗತ್ಯ
ತುಂಗಭದ್ರಾ ಅಣೆಕಟ್ಟೆಯ ೧೯ನೇ ಕ್ರಸ್ಟ್‌ಗೇಟ್ ಭಾರೀ ನೀರಲ್ಲಿ ಕೊಚ್ಚಿಕೊಂಡು ಹೋದ ಹಿನ್ನೆಲೆಯಲ್ಲಿ ರಾಜ್ಯದ ಇತರ ಜಲಾಶಯಗಳ ಸುರಕ್ಷತೆ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ. ರಾಜ್ಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕ್ರಸ್ಟ್‌ಗೇಟ್‌ಗಳನ್ನು ಪತ್ತೆ ಹಚ್ಚಿ ವರದಿ ನೀಡಲು ತಜ್ಞರ ಸಮಿತಿ ರಚಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ದುರಸ್ತಿ ಅಗತ್ಯವಿರುವ ಕ್ರಸ್ಟ್ ಗೇಟ್‌ಗಳ ಪತ್ತೆಗೆ ತಜ್ಞರ ಸಮಿತಿ ಯಾಕೆ ಬೇಕೆನ್ನುವುದು ಕೇಳಬೇಕಾದ ಪ್ರಶ್ನೆ.
ಪ್ರತಿಯೊಂದು ಅಣೆಕಟ್ಟೆಯ ನಿರ್ವಹಣೆಗೆ ಪ್ರತ್ಯೇಕವಾದ ಮಂಡಳಿ ಇದೆ. ಈ ಮಂಡಳಿಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಲ್ಲದೆ ತಜ್ಞ ಇಂಜಿನಿಯರ್‌ಗಳೂ ಇದ್ದಾರೆ. ಅಣೆಕಟ್ಟೆಯ ಸುರಕ್ಷತೆಯನ್ನು ಕಾಲಕಾಲಕ್ಕೆ ಪರೀಕ್ಷಿಸಿ ವರದಿ ನೀಡಬೇಕಿರುವುದು ಇವರ ಕರ್ತರ್ವ್ಯ. ನಾನಾ ಜಲಾಶಯ ಗಳ ೭೦ಕ್ಕೂ ಹೆಚ್ಚು ಕ್ರಸ್ಟ್ ಗೇಟ್‌ಗಳ ಬದಲಾವಣೆ/ದುರಸ್ತಿ ಅಗತ್ಯ ಎಂದು ಸರಕಾರವೇ ಈ ಹಿಂದೆ ಸದನದಲ್ಲಿ ಮಾಹಿತಿ ಹಂಚಿಕೊಂಡಿತ್ತು. ಈಗ ಅಗತ್ಯವಿರುವುದು ಅಣೆಕಟ್ಟೆಗಳ ದುರಸ್ತಿಗೆ ತುರ್ತು ಯೋಜನೆ ಮತ್ತು ಹಣಕಾಸಿನ ನೆರವು. ನೀರಾವರಿ ನಿಗಮದ ಮೂಲಗಳ ಪ್ರಕಾರ ಸರಕಾರದ ಅನುದಾನದ ಕೊರತೆಯಿಂದಲೇ ಹಲವು ಅಣೆಕಟ್ಟೆಗಳ ಸುರಕ್ಷತೆ ಅಪಾಯದಲ್ಲಿದೆ.
ದಕ್ಷಿಣ ಕರ್ನಾಟಕದ ಜೀವನದಿ ಕಾವೇರಿಗೆ ಕನ್ನಂಬಾಡಿಯಲ್ಲಿ ಕಟ್ಟಲಾದ ಅಣೆಕಟ್ಟೆಯ ಸುರಕ್ಷತೆಯು ಬಗ್ಗೆಯೂ ಆಗಾಗ ಅನುಮಾನಗಳು ವ್ಯಕ್ತವಾಗು ತ್ತಲೇ ಇದೆ. ಈ ಭಾಗದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ವಿಚಾರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ. ಇದರ ನಡುವೆಯೇ ಸ್ವಯಂಚಾಲಿತ ಗೇಟ್‌ಗಳನ್ನು ಅಳವಡಿಸುವ ಕಾರ‍್ಯ ಮಂದಗತಿಯಲ್ಲಿ ಸಾಗಿದೆ. ಕಬಿನಿ ಜಲಾಶಯದಲ್ಲೂ ಅಲ್ಲಲ್ಲಿ ನೀರು ಸೋರಿಕೆಯಾಗು ತ್ತಿದ್ದು ಇದರ ದುರಸ್ತಿಗಾಗಿ ೯೨ ಕೋಟಿ ರೂ.ಗಳ ಅನುದಾನ ಕೋರಿ ೨೦೨೦-೨೧ರಲ್ಲೇ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ.
ಆದರೆ ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಯಾದಗಿರಿ ಜಿಲ್ಲೆಯ ನಾರಾಯಪುರ ಬಸವಸಾಗರ ಜಲಾಶಯದ ೩೦ ಕ್ರಸ್ಟ್‌ಗೇಟ್‌ಗಳನ್ನು ಪ್ರತೀವರ್ಷ ದುರಸ್ತಿ ಮಾಡಬೇಕಾಗಿದೆ. ಈ ಬಗ್ಗೆ ಕಾಯಂ ಪರಿಹಾರ ಆಗಿಲ್ಲ. ಶಿವಮೊಗ್ಗದ ಭದ್ರಾ ಜಲಾಶಯದ ಎಡದಂಡೆ ಕಾಲುವೆಯಲ್ಲಿ ಪ್ರತೀದಿನ ೧೫೦ ಕ್ಯೂಸೆಕ್ ನೀರು ಸೋರಿಕೆಯಾಗುತ್ತಿದ್ದು , ನದಿ ಮಟ್ಟದ ಸ್ಲೈಸ್ ಗೇಟ್ ತಾತ್ಕಾಲಿಕ ರಿಪೇರಿಯಷ್ಟೇ ಕಂಡಿದೆ. ಇನ್ನು ತುಂಗಭದ್ರಾ ಅಣೆಕಟ್ಟೆಯಲ್ಲಿರುವ ಸುಮಾರು ೩೦ ಅಡಿ ಹೂಳನ್ನು ತೆಗೆಯುವ ಕೆಲಸವೂ ನನೆಗುದಿಗೆ ಬಿದ್ದಿದೆ. ಸಮಾನಾಂತರ ಕಾಲುವೆ ನಿರ್ಮಿಸುವ ಪ್ರಸ್ತಾಪಗಳು ಇನ್ನೂ ಕಡತದಲ್ಲಿವೆ. ಸರಕಾರ ಈಗ ನಮ್ಮ ಅಣೆಕಟ್ಟೆಗಳ ಸುರಕ್ಷತೆಯತ್ತ ತುರ್ತು ಗಮನಹರಿಸಬೇಕಾಗಿದೆ.