ಲೋಕಾ ಬಲವರ್ಧನೆ ಸ್ವಾಗತಾರ್ಹ
ಎಸಿಬಿ ರಚನೆ ಮಾಡಿ 2016 ರಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸುವ ಮೂಲಕಮಹತ್ವದ ಆದೇಶವನ್ನು ನೀಡಿದೆ.
ಜತಗ ಲೋಕಾಯುಕ್ತ ಬಲವರ್ಧನೆಗೆ ಸೂಚಿಸಿರುವುದು ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಸಿಬಿಯ ಎಲ್ಲ ಕೇಸ್‌ಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿವೆ. ಆ ಮೂಲಕ ರಾಜಕಾರಣಿಗಳ ಸ್ವಹಿತಾಸಕ್ತಿಗೆ ಬಲಿಯಾಗಿರುವ ಬಲಿಷ್ಠ ಸಂಸ್ಥೆಯೊಂದಕ್ಕೆ ಮತ್ತೆ ಮತ್ತೆ ಗತವೈಭವ ಬರಲಿದೆ.
ರಾಮಕೃಷ್ಣ ಹೆಗಡೆ ಅವರ ಅಧಿಕಾರಾವಧಿಯಲ್ಲಿ ’ಕರ್ನಾಟಕ ಲೋಕಾಯುಕ್ತ ಕಾಯಿದೆ-1984’ ಜಾರಿಗೆ ಬಂದಿದ್ದು, ನ್ಯಾ. ವೆಂಕಟಾಚಲ ಹಾಗೂ ನ್ಯಾ. ಎನ್. ಸಂತೋಷ್ ಹೆಗ್ಡೆ ಅವರ ಕಾಲದಲ್ಲಿ ಇಡೀ ದೇಶಕ್ಕೆ ಲೋಕಾಯುಕ್ತ ಪರಿಚಯವಾಯಿತು. ಅಕ್ರಮ ಗಣಿಗಾರಿಕೆ ಪ್ರಕರಣ ಹಾಗೂ ಅಧಿಕಾರದಲ್ಲಿದ್ದಾಗಲೇ ಮುಖ್ಯಮಂತ್ರಿಯೊಬ್ಬರು ಕಾರಾಗೃಹ ಸೇರಲು ಕಾರಣವಾಗಿತ್ತು.
ಅಣ್ಣಾ ಹಜಾರೆ ನೇತೃತ್ವದಲ್ಲಿ ಲೋಕಪಾಲ್ ವಿಧೇಯಕ ಜಾರಿಗಾಗಿ ಹೋರಾಟಕ್ಕೆ ಕರ್ನಾಟಕ ಲೋಕಾಯುಕ್ತ ಕಾರ್ಯ ನಿರ್ವಹಣೆಯೇ ಪ್ರಮುಖಸ್ಫೂರ್ತಿಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಲೇ ಬಂದವು.
ಹಿಂದಿನ ಕಾಂಗ್ರೆಸ್ ಸರಕಾರ ಇದ್ದಕ್ಕಿದ್ದಂತೆ ಎಸಿಬಿ ಸಂಸ್ಥೆಯನ್ನು ರಚನೆ ಮಾಡಿ, ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತಿರುವ ಹಾವಿನಂತೆ ಮಾಡಿತ್ತು. ಈ ನಡುವೆ ಲೋಕಾಯುಕ್ತ ನ್ಯಾಯಮೂರ್ತಿಗಳೂ ಭ್ರಷ್ಟಾಚಾರ ಆರೋಪದಲ್ಲಿ ಭಾಗಿಯಾಗಿದ್ದು, ಸಂಸ್ಥೆಯ ವಿಶ್ವಾಸಾರ್ಹತೆಗೆ ಚ್ಯುತಿ ಬರುವಂತಾಯಿತು. ಇದೀಗ ಹೈಕೋರ್ಟ್ ನೀಡಿರುವ ತೀರ್ಪು ಮತ್ತೆ ಲೋಕಾಯುಕ್ತಕ್ಕೆ ಆನೆಬಲ ತಂದುಕೊಟ್ಟಿದೆ.
ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಮರುಜೀವ ಬಂದಂತಾಗಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ರಚಿಸ ಲಾಗಿರುವ ಲೋಕಾಯುಕ್ತ ಸಂಸ್ಥೆಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸಬಾರದು. ಅಧಿಕಾರಿಗಳನ್ನು ನೇಮಕ ಮಾಡುವಾಗ ಅವರ ಸೇವಾ ದಾಖಲೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಹಾಗೂ ದಕ್ಷತೆಯನ್ನು ಪರಿಗಣಿಸಬೇಕು. ಲೋಕಾಯುಕ್ತಕ್ಕೆ ನೇಮಕವಾದ ಅಧಿಕಾರಿಗಳು ಕೂಡ ಯಾವ ರಾಜಕಾರಣಿ, ಅಧಿಕಾರಿಗಳ ಆಮಿಷಗಳಿಗೆ ಬಲಿಯಾಗದೇ ದಕ್ಷತೆಯಿಂದ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರಿಗಳ ಹೆಡೆಮುರಿ ಕಟ್ಟುವ ಮೂಲಕ ಲೋಕಾಯುಕ್ತ ಸಂಸ್ಥೆಯ ಘನತೆಯನ್ನು ಎತ್ತಿ ಹಿಡಿಯಬೇಕು.