ಸಂಭ್ರಮದ ಅಮೃತ ಘಳಿಗೆ
ದೇಶವಿಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಮೃತ ಘಳಿಗೆಯನ್ನು ಆಚರಿಸಿಕೊಳ್ಳುತ್ತಿದೆ. ದೇಶವಾಸಿಗಳೆಲ್ಲರಿಗೂಸಂಭ್ರಮದ ಕ್ಷಣವಿದು.
ಅಷ್ಟೇ ಅಲ್ಲ, ಬರಲಿರುವ ಭಾರತದ ಸುವರ್ಣ ಯುಗಕ್ಕೆ ನಮ್ಮ ತಯಾರಿ ಮತ್ತು ಬದ್ಧತೆ ಯನ್ನು ಮರು ಸಮರ್ಪಣೆ ಮಾಡಿ ಕೊಳ್ಳುವ ಹೊತ್ತು. ವಾಸ್ತವದಲ್ಲಿ ಭರತ ಖಂಡಕ್ಕೆ, ಅದರೊಳಗಿರುವ ಭಾರತವೆಂಬ ದೇಶಕ್ಕೆ ಬರೇ 75 ವರ್ಷವಲ್ಲ. ಅದು ಸಾವಿರಾರು ವರ್ಷಗಳ ಪ್ರಾಚೀನ ಇತಿಹಾಸ, ಪರಂಪರೆ ಹೊಂದಿರುವಂಥದ್ದು. ಆದರೆ ಆಧುನಿಕ ಕಾಲದ ಜಾಗತಿಕ ರಾಜಕೀಯದ ಸ್ವರೂಪದಲ್ಲಿ ನಮ್ಮ ಸ್ವತಂತ್ರ ಭಾರತ 75 ನೇ ವರ್ಷದ ಒಂದು ಮಹತ್ವದ ಘಟ್ಟವನ್ನು ಹಾದುಹೋಗುತ್ತಿದೆ.
ಈ ೭೫ ವರ್ಷಗಳಲ್ಲಿ ಭಾರತ ಹಲವಾರು ಸಾಧನೆಗಳನ್ನು ಮಾಡಿದೆ. ಬ್ರಿಟಿಷರಿಂದ ಹಿಡಿದು ಈ ದೇಶಕ್ಕೆ ದಾಳಿ ಇಟ್ಟವರೆಲ್ಲರೂ ದೋಚಿ ಖಾಲಿ ಮಾಡಿದ್ದ ದೇಶದ ಸಂಪತ್ತಿನ ಮರು ನಿರ್ಮಾಣ, ಅಧೋಗತಿಗೆ ಇಳಿದಿದ್ದ ಜನರ ಜೀವನ ಮಟ್ಟದ ಸುಧಾರಣೆ, ರಾಜಕೀಯ ಸ್ಥಿರತೆ, ಸಾಮಾಜಿಕ ಪರಿವರ್ತನೆಗಳು- ಇವೆಲ್ಲಕ್ಕೂ ಭಾರತ ಈ 75 ವರ್ಷ ಗಳಲ್ಲಿ ಸಾಕ್ಷಿಯಾಗಿದೆ. ಕಾಲ ಕಾಲಕ್ಕೆ ಅಧಿಕಾರಕ್ಕೆ ಬಂದ ಸರಕಾರಗಳೆಲ್ಲವೂ ಈ ದೇಶದ ಅಭ್ಯುದಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ.
ಸರಿಸುಮಾರು ಒಂದು-ಒಂದೂವರೆ ದಶಕಗಳ ಕಾಲ ದೇಶದ ಪ್ರಗತಿಗೆ ಅಡ್ಡಿಯಾಗಿದ್ದ ರಾಜಕೀಯ ಅಸ್ಥಿರತೆ ಈಗ ಕೊನೆಗೊಂಡಿದೆ. ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಸುಭದ್ರ ಸರಕಾರ ನೆಲೆಸಿದೆ. ಪ್ರಧಾನಿ ಮೋದಿ ನೇತೃತ್ವದ ಸರಕಾರ ಅತ್ಯಂತ ಸ್ಪಷ್ಟ ಗುರಿ ಮತ್ತು ಸ್ಪಷ್ಟ ಮಾರ್ಗದ ನಿರ್ದೇಶನಗಳೊಂದಿಗೆ ಭಾರತವನ್ನು ಮುನ್ನಡೆಸುತ್ತಿದೆ. ಇವೆಲ್ಲವೂ ಭಾರತದ ಪ್ರಸ್ತುತ ಆರ್ಥಿಕತೆಯ ದೃಢತೆ, ಜಾಗತಿಕ ಮಟ್ಟದಲ್ಲಿ ಹೆಚ್ಚಿದ ವರ್ಚಸ್ಸು ಮತ್ತು ಪ್ರಭಾವಗಳಲ್ಲಿ ಈ ಬೆಳವಣಿಗೆಗಳನ್ನು ಧಾರಾಳವಾಗಿ ಕಾಣಬಹುದು.
ಆಡಳಿತದಲ್ಲಿ ಬಿಗಿ, ದೇಶಪ್ರೇಮ, ಸ್ವಚ್ಛತೆ, ಭ್ರಷ್ಟಾಚಾರದ ವಿರುದ್ಧ ಸಮರ, ಭಯೋತ್ಪಾದನೆಯ ನಿಗ್ರಹ ಮತ್ತು ಬಿಗಿಗೊಂಡ ಭದ್ರತಾ ವ್ಯವಸ್ಥೆಯ ಪರಿಣಾಮವಾಗಿ ದೇಶದ ಎರಡು ಪ್ರಧಾನ ಆರ್ಥಿಕ ಆಧಾರ ಸ್ತಂಭಗಳಾದ ಉದ್ಯಮ ಕ್ಷೇತ್ರ ಮತ್ತು ಕೃಷಿ ಕ್ಷೇತ್ರಸುಸ್ಥಿರ ಪ್ರಗತಿ ಕಾಣುತ್ತಿದೆ. ಕೊರೊನಾದಂತಹ ಜಾಗತಿಕ ಸಾಂಕ್ರಾಮಿಕದ ಪ್ರತಿಕೂಲ ಸನ್ನಿವೇಶದಲ್ಲೂ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಚೇತರಿಕೆ ಮತ್ತು ಅಭಿವೃದ್ಧಿಯ ವೇಗ ಜೋರಾ ಗಿದೆ. ಇವೆಲ್ಲವೂ ನವಭಾರತದ ಸಂಕಲ್ಪಗಳನ್ನು ಗಟ್ಟಿಗೊಳಿಸುವ ಬೆಳವಣಿಗೆಗಳಾಗಿವೆ