ಕಟ್‌ಔಟ್ ಭಕ್ತಿಗೆ ಕಡಿವಾಣ ಬೀಳಲಿ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಸಂಭ್ರಮದ ತರಂಗಗಳು ಹಾರಾಡಿದವು.ಪ್ರತಿವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಸಾಮಾನ್ಯವಾಗಿ ಶಾಲೆ, ಕಾಲೇಜುಗಳು ಹಾಗೂ ಸರಕಾರಿ ಕಚೇರಿಗಳಿಗೆಸೀಮಿತವಾಗಿರುತ್ತಿತ್ತು.
ಆದರೆ ಈ ಬಾರಿ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಅದು ಜನಸಾ ಮಾನ್ಯರ ಸಂಭ್ರಮವಾಗಿಯೂ ರೂಪುಗೊಂಡಿತು. ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರುವ ಮೂಲಕ, ದೇಶಪ್ರೇಮದ ಅಭಿವ್ಯಕ್ತಿ ಹಾಗೂ ದೇಶದ ಸಮಗ್ರತೆಯ ಅನಾವರಣಕ್ಕೆ ಈ ವಿಶೇಷ ಸಂದರ್ಭ ಪ್ರೇರಣೆಯಾಗಿ ಪರಿಣಮಿಸಿದ್ದು ಹೆಮ್ಮೆಯ ಸಂಗತಿ. ಆದರೆ ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಕಟ್‌ಔಟ್ ಭಕ್ತಿಯ ನೆಪದಲ್ಲಿ ಕೆಲವೆಡೆ ಗಲಾಟೆಗಳು ನಡೆದಿದ್ದು ಅವಮಾ ನಕರ.
ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಮತ್ತು ಟಿಪ್ಪುಸುಲ್ತಾನ್ ಕಟ್‌ಔಟ್ ಅಳವಡಿಕೆ ಸಂಬಂಧ ವಿವಾದವೇರ್ಪಟ್ಟು ಯುವಕನೊಬ್ಬ ನಿಗೆ ಚೂರಿ ಇರಿಯಲಾಗಿದೆ. ಬೆಂಗಳೂರಿನಲ್ಲೂ ಕೆಲವು ಯುವಕರು ಕಟ್‌ಔಟ್ ಹರಿದು ಜೈಲು ಪಾಲಾಗಿದ್ದಾರೆ. ಸ್ವಾತಂತ್ರ್ಯಕ್ಕೆ ಹಲವಾರು ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ ಯಾರೊಬ್ಬರ ಸ್ವತ್ತಲ್ಲ,ಅದು ಎಲ್ಲರ ಸ್ವತ್ತಾಗಿದೆ. ನೆಹರು, ಸಾವರ್ಕರ್ ಸೇರಿದಂತೆ ಪ್ರತಿಯೊಬ್ಬರೂ ಭವ್ಯ ಭಾರತ ನಿರ್ಮಾಣಕ್ಕೆ ರಕ್ತ ಹರಿಸಿದ್ದಾರೆ.
ಆದರೆ ಇಂದಿನ ಯುವಕರು ಸ್ವಾತಂತ್ರ್ಯ ಹೋರಾಟಗಾರರನ್ನು ತಮ್ಮ ತಮ್ಮ ಪಂಗಡಗಳಿಗೆ ಸೇರಿಸಿಕೊಂಡು ಹೊಡೆದಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಭಾರತವು ವೈವಿಧ್ಯತೆಯ ದೇಶ. ಸಮಾಜದಲ್ಲಿ ಸಮಾನತೆ, ಸಹೋದರೆಯಿಂದ ಬದುಕಬೇಕಿದೆ. ಆದರೆ ಇವತ್ತಿನ ಸಮಾಜ ಜಾತಿ, ಧರ್ಮ, ಮತಗಳಾಧಾರಿತವಾಗಿ ವಿಂಗಡನೆಯಾಗುತ್ತಿರುವುದರಿಂದ ಪ್ರಜಾಪ್ರಭುತ್ವಕ್ಕೆ ಕುತ್ತು ತರಲಾಗುತ್ತಿದೆ.
ದೇಶಭಕ್ತಿಯನ್ನು ದ್ವೇಷ ರಾಜಕಾರಣಕ್ಕೆ ಬಳಸಿಕೊಳ್ಳುವ ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ. ಈ ಕುರಿತು ಮತ್ತೊಂದು ಹೋರಾಟ ಆರಂಭವಾಗಬೇಕಾದ ಅನಿವಾರ್ಯತೆ ಇದೆ. ಆ ದಿಕ್ಕಿನಲ್ಲಿ ಹೆಜ್ಜೆ ಇಡಲು ಯುವಕರು ಮುಂದಾಗಬೇಕಿದೆ. ದೇಶ ಪ್ರೇಮದ ಹೆಸರಿನಲ್ಲಿ ದೇಶವನ್ನು ಛಿದ್ರ ಛಿದ್ರ ಮಾಡುವ ಪ್ರಯತ್ನಗಳನ್ನು ಯುವಕರೇ ತಡೆಯಬೇಕಿದೆ. ಆ ಮೂಲಕ ಭಾರತವುಸರ್ವ ಜನಾಂಗದ ಶಾಂತಿಯ ತೋಟ ಎಂಬುದನ್ನು ನಿರೂಪಿಸಬೇಕಿದೆ.