ಸಮಾನತೆಯ ಹಕ್ಕನ್ನು ರಕ್ಷಿಸಲು ಯಾರೂ ಇಲ್ಲವೇ?
ರಾಜಸ್ಥಾನದ ಜಲೋರ್ಜಿಲ್ಲೆಯಸುರಾನ ಗ್ರಾಮದಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಇಂದ್ರ ಮೇಘವಾಲ್ (9) ಎಂಬ ಪರಿಶಿಷ್ಟ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ ಕುಡಿಯುವ ನೀರಿನ ಮಡಕೆ ಮುಟ್ಟಿದ ಎನ್ನುವ ಕಾರಣಕ್ಕೆ ಶಿಕ್ಷಕ ಚೈಲ್ ಸಿಂಗ್ಎಂಬುವವರು ವಿದ್ಯಾರ್ಥಿಯನ್ನು ಕುಡಿಯುವ ನೀರಿನ ಹೂಜಿಯಿಂದಲೇ ಥಳಿಸಿದ್ದು, ಅದರಿಂದ ಬಾಲಕ ಮೃತನಾಗಿದ್ದಾನೆ.
ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ ಈ ಸಂದರ್ಭದಲ್ಲಿ ನಡೆದಿರುವ ಈ ಅಮಾನವೀಯ ಕೃತ್ಯವು ನಾಗರಿಕ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿದೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಈ ಸಮಸ್ಯೆ ಬಗೆಹರಿಯದಿರುವುದಕ್ಕೆ ನನ್ನ ಜಾತಿಯೇ ಶ್ರೇಷ್ಠ, ನನ್ನ ಧರ್ಮವೇ ಶ್ರೇಷ್ಠ ಎಂಬ ಕೊಳಕು ಮನಸ್ಸುಗಳು. ದೇಶದ ಅನೇಕ ಹಳ್ಳಿಗಳಲ್ಲಿ ಇಂದಿಗೂ ಪರಿಶಿಷ್ಟ ಸಮುದಾಯದ ಜನರಿಗೆ ಪ್ರವೇಶವಿಲ್ಲ.
ಈ ಹಿಂದೆ ಸಂಸದರೊಬ್ಬರಿಗೆ ಪರಿಶಿಷ್ಟ ಸಮುದಾಯವರು ಎಂಬ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶ ನೀಡದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿತ್ತು. ಸಂಸದರಿಗೇ ಗ್ರಾಮ ಪ್ರವೇಶ ನಿರಾಕರಿಸಿದ್ದರೆಂದರೆ ಅಲ್ಲಿನ ಪರಿಶಿಷ್ಟ ಸಮುದಾಯದ ಸಾಮಾನ್ಯ ಜನರ ಪರಿಸ್ಥಿತಿ ಹೇಗಿರಬೇಕು ಎಂಬುದು ಯೋಚಿಸಬೇಕಾದ ಸಂಗತಿ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದಲಿತರಿಗೆ ಒದಗಿಸಿದ ಸಮಾನತೆಯ ಹಕ್ಕನ್ನು ರಕ್ಷಿಸಲು ಯಾರೂ ಇಲ್ಲವೇ? ಎಂಬ ಪ್ರಶ್ನೆ ಉದ್ಭವಾಗುತ್ತದೆ. ಮೃತ ಬಾಲಕನ ಕ್ಷೇತ್ರದ ಶಾಸಕ ಪಾನ್ ಚಂದ್ ಮೇಘವಾಲ್ ಅವರು ವಿದ್ಯಾರ್ಥಿ ಕುಟುಂಬಕ್ಕೆ50ಲಕ್ಷ ರು. ಪರಿಹಾರ ಮತ್ತು ಒಬ್ಬರಿಗೆ ಸರಕಾರಿ ನೌಕರಿ ಕೊಡುವಂತೆ ರಾಜಸ್ಥಾನ ಸರಕಾರವನ್ನು ಆಗ್ರಹಿಸಿದ್ದರು.
ಆ ಬೇಡಿಕೆಗೆ ಅಲ್ಲಿನ ಸರಕಾರ ಸ್ಪಂದಿಸದೇ ಹೋದಾಗ ರಾಜೀನಾಮೆ ಕೊಟ್ಟಿದ್ದು, ಇದೊಂದು ದಿಟ್ಟ ನಡೆ. ಕಣ್ಮುಂದೆ ಕೊಲೆ ನಡೆದರೂ ಅಧಿಕಾರ, ಕುರ್ಚಿಗಾಗಿ ಕಂಡೂ ಕಾಣದಂತೆ ಇರುವ ರಾಜಕಾರಣಿಗಳಿರುವ ಈ ಸಮಾಜದಲ್ಲಿ ಶಾಸಕ ಪಾನ್ ಚಂದ್ ಮೇಘವಾಲ್ ಅವರ ನಡೆ ಮೆಚ್ಚುವಂತಹದ್ದು. ಇಂದ್ರ ಮೇಘವಾಲ್‌ನ ಕೊಲೆ ಪ್ರಕರಣವು ಗಂಭೀರ ಸ್ವರೂಪದ್ದಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ದೇಶದಲ್ಲಿ ಮತ್ತೆಂದೂ ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.