ಹೊಂದಾಣಿಕೆ ರಾಜಕಾರಣ ಬೇಡ
ರಾಜಕೀಯ ನಾಯಕರು ರಾಜಕಾರಣದ ಮುನ್ನೆಲೆಯಲ್ಲಿದ್ದು ಅಧಿಕಾರದ ಗದ್ದುಗೆ ಹಿಡಿಯಲು ಹೇಗೆ ತಂತ್ರಗಳನ್ನು ಮಾಡುತ್ತಾರೆ ಎಂಬುದನ್ನು ಸಚಿವ ಬಿ.ಶ್ರೀರಾಮುಲು ಅವರು ಬಳ್ಳಾರಿಯ ಕಾರ್ಯಕ್ರಮದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.ಅವರು ಹೇಳಿದ್ದು ಸಿದ್ದರಾಮಯ್ಯ ಮತ್ತು ತಮ್ಮ ನಡುವಿನ ಹೊಂದಾಣಿಕೆ ರಾಜಕಾರಣದ ಕುರಿತಾಗಿ ಆದರೂ ದೇಶದ ಎಲ್ಲ ರಾಜ್ಯಗಳಲ್ಲಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ಹೊಂದಾಣಿಕೆ ರಾಜಕಾರಣ ನಡೆದೇ ಇದೆ.
ಸಾರ್ವಜನಿಕರ ಎದುರು ಬದ್ಧ ವೈರಿಗಳಂತೆ ಕಿತ್ತಾಡುವ ರಾಜಕಾರಣಿಗಳು ವಿಧಾನಸಭೆ ಪ್ರವೇಶಿಸಲು ಹೇಗೆಲ್ಲಾ ಹೊಂದಾಣಿಕೆ ರಾಜಕಾರಣ ಮಾಡಿ ಕೊಳ್ಳುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಬಲವಾಗಿ ಬೆಳೆದು ನಿಂತ ವ್ಯಕ್ತಿಗಳ ಸುತ್ತಲೇ ಅಧಿಕಾರ ಏಕೆ ಗಿರಕಿ ಹೊಡೆಯುತ್ತಿರುತ್ತದೆ ಎಂಬುದಕ್ಕೆ ರಾಮುಲು ಅವರು ಉತ್ತರ ನೀಡಿದ್ದಾರೆ. ‘ನಾನೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ, ಅವರೂ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ.
ನಾನೊಂದು ಕ್ಷೇತ್ರದಲ್ಲಿ ಗೆಲ್ಲುತ್ತೇನೆ, ಅವರೊಂದು ಕ್ಷೇತ್ರದಲ್ಲಿ ಗೆಲ್ಲುತ್ತಾರೆ. ಆ ಮೂಲಕ ಇಬ್ಬರೂ ವಿಧಾನಸಭೆ ಪ್ರವೇಶ ಮಾಡುತ್ತೇವೆ’ ಎಂದು ಹೇಳಿದ್ದಾರೆ. ಹಾಗಾದರೆ ಈ ಜಿದ್ದಾಜಿದ್ದಿ, ತೊಡೆ ತಟ್ಟುವುದು ಎಲ್ಲವೂ ಜನರನ್ನು ಮರುಳು ಮಾಡುವ ತಂತ್ರಗಳೇ? ಮುಂದೊಂದು ದಿನ ನಮಗೂ ಅಧಿಕಾರ ಸಿಗಬಹುದು ಎಂಬ ಆಸೆಯಲ್ಲಿ ಹತ್ತಾರು ವರ್ಷ ಮುನ್ನೆಲೆ ಯಲ್ಲಿದ್ದ ರಾಜಕಾರಣಿಗಳ ಸುತ್ತಲೇ ಓಡಾಡಿಕೊಂಡಿರುವ ಕಾರ್ಯಕರ್ತರು ಈ ಹೊಂದಾಣಿಕೆ ರಾಜಕಾರಣದಿಂದ ವಂಚಿತ ರಾಗುವುದಿಲ್ಲವೇ? ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಒಬ್ಬರೇ ಗೆದ್ದರೆ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯ.
ಆಗ ತೆರವಾದ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸುವುದರಿಂದ ಸಾರ್ವಜನಿಕರ ಹಣ ಹಾಳು ಮಾಡಿದಂತಲ್ಲವೇ? ಇದುಪ್ರಜಾಸತ್ತಾತ್ಮಕ ನೀತಿಗೆ ವಿರುದ್ಧವಾದುದು. ಈ ಹೊಂದಾಣಿಕೆ ರಾಜಕಾರಣ ಹೀಗೇ ಮುಂದುವರಿದರೆ ಪ್ರಜಾಸತ್ತೆಯನ್ನು ಉಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಪರ್ಯಾಯ ನಾಯಕತ್ವದ ಕಡೆ ಜನರು ಮುಖ ಮಾಡಬೇಕಾದ ಅನಿವಾರ್ಯತೆ ಇದೆ.
ಜಾತಿ, ಧರ್ಮ, ಭಾಷೆ, ಪ್ರಾಂತ, ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗದೇ ತಮ್ಮ ನಾಯಕರನ್ನು ಚುನಾಯಿಸುವ ಪ್ರವೃತ್ತಿ ಬೆಳೆಸಿ ಕೊಂಡರೆ ಮಾತ್ರ ಅಧಿಕಾರ ವಿಕೇಂದ್ರಿಕರಣ ಸಾಧ್ಯವಾಗುತ್ತದೆ. ಇಲ್ಲವಾದರೆ ರಾಜಪ್ರಭುತ್ವದ ಆಡಳಿತದಲ್ಲಿದ್ದಂತೆ ಅಧಿಕಾರದಲ್ಲಿದ್ದವರಿಗೇ ಪುನಃ ಅಧಿಕಾರ ಲಭಿಸುವ ಪದ್ಧತಿ ಬೆಳೆಯುತ್ತಲೇ ಹೋಗುತ್ತದೆ.