ಗಡುವಿನೊಳಗೆ ಸ್ಮಾರ್ಟ್‌ಸಿಟಿ ಕಾಮಗಾರಿ ಮುಗಿಯಲಿ
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ಮಾರ್ಟ್ ಸಿಟಿ ಮಿಷನ್‌ಗೆ 2015ಕ್ಕೆ ಚಾಲನೆ ನೀಡಲಾಗಿದ್ದು,2023ರ ಜೂನ್‌ಗೆ ಈ ಯೋಜನೆ ಮುಗಿಯಲಿದೆ.
ಕಳೆದ ಏಳು ವರ್ಷಗಳಲ್ಲಿ ಸಾವಿರಾರು ಕೋಟಿ ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆಯಾದರೂ ಇನ್ನೂ ಸಾಕಷ್ಟು ಕಾಮಗಾರಿಗಳು ಬಾಕಿ ಉಳಿದಿವೆ. ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು 11 ತಿಂಗಳು ಗಳಷ್ಟೇ ಉಳಿದಿವೆ. ಯೋಜನೆಯ ಗಡುವು ಮುಗಿದ ಬಳಿಕ ಕೇಂದ್ರ ಸರಕಾ ರವು ರಾಜ್ಯಕ್ಕೆ ಅನುದಾನ ಸ್ಥಗಿತಗೊಳಿಸುವ ಸಾಧ್ಯತೆ ಇರುವುದರಿಂದ ನಿಗದಿತ ಅವಽಯಲ್ಲಿ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ರಾಜ್ಯ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.
ಕರ್ನಾಟಕದಲ್ಲಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಅನುದಾನದ ನೆರವಿನಿಂದ ಇಲ್ಲಿಯವರೆಗೆ ?2035 ಕೋಟಿ ಮೊತ್ತದ 395 ಕಾಮಗಾರಿ ಗಳನ್ನು ಪೂರ್ಣಗೊಳಿಸಲಾಗಿದೆ. ?4885 ಕೋಟಿ ಮೊತ್ತದ 252 ಯೋಜನೆಗಳನ್ನು ಕೈಗೆತ್ತಿಕೊಳ್ಳ ಲಾಗಿದೆ. ?2239 ಕೋಟಿ ವೆಚ್ಚದ 41 ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿವೆ.
ಮಂಗಳೂರಿಲ್ಲಿ ?34 ಕೋಟಿ ವೆಚ್ಚದ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಎರಡನೇ ಹಂತದ ಕಾಮಗಾರಿ ಪ್ರಾರಂಭವೇ ಆಗಿಲ್ಲ. 2023ರ ಜೂನ್ ತಿಂಗಳ ಗಡುವಿನೊಳಗೆ ಪೂರ್ಣಗೊಳ್ಳುವುದು ಅನುಮಾನ ಎಂಬ ಸ್ಥಿತಿಯಲ್ಲಿವೆ. ಹೀಗಾಗಿ, ಅಪೂರ್ಣ ಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಕೇಂದ್ರ ಸರಕಾರದ ಯೋಜನೆ ಯೊಂದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ.
ಆ ಮೂಲಕ ರಾಜ್ಯದ ಜನರಿಗೂ ಅನುಕೂಲ ಮಾಡಿಕೊಡಬೇಕಿದೆ. ಅಲ್ಲದೆ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಲ್ಲಿ ತಾಂತ್ರಿಕ ಸಲಹೆಗಾರರು, ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಹಲವಾರು ಯಡವಟ್ಟುಗಳು ನಡೆದಿದ್ದು, ಕಾಮಗಾರಿಗಳು ಅವೈಜ್ಞಾನಿಕವಾಗಿ ನಡೆಯುತ್ತಿವೆ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ. ಇದು ಸ್ಮಾರ್ಟ್ ಸಿಟಿ ಯೋಜನೆಯಕುರಿತು ಅಪಹಾಸ್ಯ ಮಾಡುವಂತಾಗಿದೆ. ಕೂಡಲೇ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ, ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಗಳನ್ನು ಮುಗಿಸಲು ಕ್ರಮ ವಹಿಸಬೇಕು.