ವಿವಾದಾಸ್ಪದ ಜಾಗಗಳನ್ನು ಸರ್ವರೂ ಬಳಸುವಂತಾಗಲಿ
ಯಾವುದೋ ಕಾಲದಲ್ಲಿ, ಯಾವುದೋ ಕಾರಣಕ್ಕಾಗಿ ಯಾವುದೋ ಒಂದು ಜಾತಿಗೆ ಅಥವಾ ಸಮುದಾಯಕ್ಕೆ ಸಿಕ್ಕಿರುವ ಜಾಗಗಳನ್ನು ಸರ್ವ ಸಮುದಾಯಕ್ಕೂ ಸೇರಿದ ಸ್ವತ್ತು ಎಂದು ಪರಿಗಣಿಸುವ ಬದಲು ತಮ್ಮ ಸಮುದಾಯಕ್ಕೇ ಸಂಬಂಽಸಿದ ಆಸ್ತಿ, ಬೇರೆಯವರಿಗೆ ಆ ಜಾಗದಲ್ಲಿ ನಿಷೇಧ ಹೇರಲಾಗಿದೆ ಎಂದು ಬಿಂಬಿಸಲಾಗುತ್ತಿದೆ.
ಇದೀಗ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದದಲ್ಲೂ ಇದೇ ಆಗುತ್ತಿದೆ. ಚಾಮರಾಜಪೇಟೆಯ ಆಟದ ಮೈದಾನ ಮಾಲೀಕತ್ವದ ವಿಚಾರದಲ್ಲಿ ವಾದ- ವಿವಾದಗಳು ಕೋರ್ಟ್ ಮೆಟ್ಟಿಲು ಏರಿವೆ. ಈ ನಡುವೆಯೇ ಅಲ್ಲಿ ಈ ಸಲದ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜಾರೋಹಣ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಅದೇ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಪರ- ವಿರೋಧದ ಮಾತುಗಳು ಕೇಳಿಬರುತ್ತಿವೆ. ಈ ಮೈದಾನದ ವಿಚಾರವಾಗಿ ಎರಡು ಧರ್ಮಗಳ ಜನರ ನಡುವಿನ ದ್ವೇಷ ಹೊಗೆಯಾಡುತ್ತಲೇ ಇದೆ.
ಇಲ್ಲಿ ಯಾವುದಾದರೂ ಒಂದು ಧರ್ಮದ ಜನರನ್ನು ತೃಪ್ತಿಪಡಿಸಲು ಯತ್ನಿಸಿದರೆ, ಗಲಭೆಗಳು, ಕರ್ಫ್ಯೂ, ನಿಷೇಧಾಜ್ಞೆ, ವ್ಯಾಪಾರ ವಹಿವಾಟುಗಳ ಮೇಲೆ ನಿರ್ಬಂಧ ಹೀಗೆ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗುತ್ತದೆ. ಕೆಲವು ರಾಜಕಾರಣಿ ಗಳಿಗೆ, ಪಕ್ಷಗಳಿಗೆ ಇಂತಹ ವಿಷಯವನ್ನು ಜೀವಂತವಾಗಿಡುವುದೇ ಬೇಕಾಗಿದೆ. ಏಕೆಂದರೆ ಇಂತಹ ವಿಷಯಗಳಿಂದಲೇ ಮತಬ್ಯಾಂಕ್ ರಾಜಕಾರಣ, ಜಾತಿ ರಾಜಕಾರಣಕ್ಕೆ ಸುಲಭವಾಗಿ ಅವಕಾಶವಾಗುತ್ತದೆ.
ಹುಬ್ಬಳ್ಳಿಯ ಈದ್ಗಾ ಮೈದಾನದ ಹೆಸರಿನಲ್ಲಿ ನಡೆದ ಸಂಘರ್ಷಗಳಿಂದ ರಾಜಕೀಯ ಮುನ್ನೆಲೆಗೆ ಬಂದು ಇಂದು ರಾಜಕೀಯ ಜೀವನದಲ್ಲಿ ಸುಭದ್ರವಾಗಿ ನೆಲೆಯೂರಿದ ಉದಾಹರಣೆಗಳು ಇವೆ. ಹೀಗಾಗಿ ಇಂತಹ ಬೆಂಕಿಗೆ ತುಪ್ಪ ಸುರಿಯಲು ಬಯಸುತ್ತಾ ರೆಯೇ ವಿನಾಃ ತಣ್ಣಗಾಗಿಸಲು ಪ್ರಯತ್ನಿಸುವುದಿಲ್ಲ. ಆದರೆ ಇದರಿಂದ ನರಳುವವರು ಮಾತ್ರ ಜನಸಾಮಾನ್ಯರು. ಆದ್ದರಿಂದ ಇಂತಹ ವಿಷಯಗಳಲ್ಲಿ ಸರಕಾರ ದೃಢ ನಿಲುವು ತಾಳಬೇಕಾದ ಅಗತ್ಯವಿದೆ.
ರಾಜ್ಯದಲ್ಲಿ ವಿವಾದಾಸ್ಪದವಾಗಿರುವ ಮೈದಾನದಂತಹ ಸ್ವತ್ತುಗಳನ್ನು ಸರಕಾರ ವಶಕ್ಕೆ ಪಡೆದು, ಸರ್ವಜನರಿಗೂ ಜಾತಿ ಮತಭೇದವೆಣಿಸದೆ ಮುಕ್ತವಾಗಿ ಬಳಸಲು ಅವಕಾಶ ನೀಡಬೇಕು. ಹಬ್ಬ ಹರಿದಿನಗಳ ಆಚರಣೆಗೆ ಆ ಜಾಗಗಳನ್ನು ಯಾರಾ ದರೂ ಬಳಸಬಹುದಾದ ರೀತಿಯಲ್ಲಿ ನೀತಿಯನ್ನು ಜಾರಿಗೊಳಿಸಬೇಕಿದೆ.