ಹಬ್ಬದ ಸಂಭ್ರಮ ಹಬ್ಬಲಿ
ನಾಡಿನ ಜನತೆಗೆ ಗೌರಿಗಣೇಶ ಹಬ್ಬದ ಸಂಭ್ರಮ ಒಂದೆಡೆಯಾದರೆ, ಹಬ್ಬದ ಆಚರಣೆಗೂ ಬಿಡುವು ಕೊಡದೆ ಸುರಿಯುತ್ತಿರುವಅಬ್ಬರದ ಮಳೆಯಿಂದ ಉಂಟಾದ ವ್ಯಾಪಕ ಹಾನಿ ಮತ್ತೊಂದೆಡೆ.
ಸುಖ-ದುಃಖಗಳ ಸಮ್ಮಿಶ್ರ ಭಾವವನ್ನು ಹುಟ್ಟಿಸುವ ಸನ್ನಿವೇಶವಿದು. ಭಾರತದ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಜನರನ್ನು ಒಗ್ಗೂಡಿಸಿದ ಅತ್ಯಂತ ಜನಪ್ರಿಯ ಹಬ್ಬ. ವಿಘ್ನ ವಿನಾಶಕ ಗಣಪತಿ ನಾಡಿನ ಎಲ್ಲರನ್ನೂ ಕರುಣೆಯಿಂದ ಅನುಗ್ರಹಿಸಿ, ಬದುಕಿನ ವಿಘ್ನ-ವಿಡ್ಡೂರಗಳನ್ನು ಪರಿಹರಿಸಿ ಮುನ್ನಡೆಸಲಿ ಎಂದು ಪ್ರಾರ್ಥಿಸುವ ಹೊತ್ತು. ಹಬ್ಬದ ಆಚರಣೆ ಎಲ್ಲರಿಗೂ ಸಂತಸ, ಸಂಭ್ರಮ ತರುವಂತಿರಲಿ.
ವ್ಯಾಜ್ಯ, ಕಲಹ, ಅಶಾಂತಿಗಳನ್ನು ದೂರ ಮಾಡುವಂತಿರಲಿ. ನಾಡಿನ ಕಾನೂನು ಸುವ್ಯವಸ್ಥೆಯ ಪಾಲನೆಗೆ ಯಾವುದೇ ಸಮಸ್ಯೆ ಆಗದಂತಿರಲಿ. ಆಳುವ ಸರಕಾರ ಮತ್ತು ಆಡಳಿತಶಾಹಿ ಜನರ ಭಾವನೆಗಳನ್ನು ಗೌರವಿಸಿ ಸಂಭ್ರಮದಲ್ಲಿ ಭಾಗಿಯಾಗಲಿ. ಮಳೆ ಹಾನಿಯಿಂದ ಸಂತ್ರಸ್ತರಾದ ಸಾವಿರಾರು ಮಂದಿ ಸಹಜೀವಿಗಳ ಸಂಕಷ್ಟಕ್ಕೆ ಮಿಡಿಯುವ ಮನಸ್ಸು ನಮ್ಮದಾಗಲಿ. ಮಳೆಹಾನಿಯಿಂದ ಸಂತ್ರಸ್ತರಾದ ವರಿಗೆ ಕ್ಷಿಪ್ರ ಪುನರ್ವಸತಿ ಮತ್ತು ಪರಿಹಾರ ಕಾರ್ಯ ಕೈಗೊಳ್ಳಬೇಕು.
ಜತೆಗೆ ಇವೆಲ್ಲವೂ ಸರಕಾರದ್ದೇ ಕೆಲಸ ಎಂದು ಜನರೂ ಸುಮ್ಮನೆ ಕೂರದೆ ಯುದ್ಧ ದೋಪಾದಿಯಲ್ಲಿ ಪರಿಹಾರ ಕಾರ್ಯಗಳಿಗೆ ಕೈಜೋಡಿಸಿದರೆ ಸಂಕಷ್ಟದ ಬೇಗುದಿಯನ್ನು ಕಡಿಮೆ ಮಾಡಿ ಸಂಭ್ರಮದ ತೂಕವೇ ಹೆಚ್ಚಾಗುವಂತೆ ಮಾಡಬಹುದು. ಹಬ್ಬದ ಸಂಭ್ರಮಕ್ಕೆ ಅಡ್ಡಿಪಡಿಸಲು ನಾನಾ ರೀತಿಯಲ್ಲಿ ಯತ್ನಿಸುವ ದುಷ್ಕರ್ಮಿಗಳ ಹುನ್ನಾರಗಳಿಗೆ ಬಲಿ ಬೀಳದೆ, ಸೌಜನ್ಯ-ಸೌಹಾರ್ದದ ಹಬ್ಬವನ್ನು ಆಚರಿಸೋಣ. ದಸರಾ, ದೀಪಾವಳಿ ಕೂಡ ಇದೇ ಪರಂಪರೆಯಲ್ಲಿ ಆಚರಿಸುವಂತಾಗಲಿ.
ಸಮುದಾಯಗಳ ನಡುವೆ ಮಾನವ ನಿರ್ಮಿತ ತಡೆಗೋಡೆಗಳು ನಿವಾರಣೆಯಾಗಲಿ. ಕೃತಕ ಮತ್ತು ರಾಸಾಯನಿಕ ಬಣ್ಣಗಳನ್ನು ಲೇಪಿಸಿದ ಮೂರ್ತಿಗಳನ್ನು ಬಳಸದೆ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನು ಆರಾಧಿಸೋಣ.