ರಾಜ್ಯಗಳ ಕಷ್ಟಕ್ಕೆ ಕೇಂದ್ರ ಹೆಗಲು ಕೊಡಲಿ
ಕಳೆದ ಎರಡು ದಿನಗಳಲ್ಲಿ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯು ಗೌರಿ ಗಣೇಶ ಹಬ್ಬದ ಸಂಭ್ರಮವನ್ನೇಕಸಿದುಕೊಂಡಿದೆ.
ಸೋಮವಾರ ಸಂಜೆ ಸುರಿದ ಮಳೆಗೆ ರಾಜ್ಯಾದ್ಯಂತ 184 ಮನೆಗಳು ಕುಸಿದಿವೆ. ಮಳೆಯಿಂದ ಇಬ್ಬರು ಮೃತಪಟ್ಟಿದ್ದಾರೆ. 258 ಜಾನುವಾರುಗಳು ಮೃತಪಟ್ಟಿವೆ. ರಾಜ್ಯದಲ್ಲಿ 27ಜಿಲ್ಲೆಗಳಲ್ಲಿವಾಡಿಕೆಗಿಂತ ಹೆಚ್ಚಿನ ಮಳೆ ಬಿದ್ದಿದೆ. ಅತಿವೃಷ್ಟಿ ಮತ್ತು ಪ್ರವಾಹದಿಂದ ?7,647.13 ಕೋಟಿಯಷ್ಟು ಹಾನಿ ಸಂಭವಿಸಿದೆ.
ಒಟ್ಟು 9,244 ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ನೆಲೆಸಿದ್ದಾರೆ ಎಂದು ಸರಕಾರ ತಿಳಿಸಿದೆ. ಇವಿಷ್ಟೂ ಸರಕಾರ ಕೊಟ್ಟ ಲೆಕ್ಕ. ಲೆಕ್ಕಕ್ಕೆ ಸಿಗದೇ ಇರುವ ಸಾವು-ನೋವು ಮತ್ತು ನಷ್ಟದ ಪ್ರಮಾಣ ಹಲವು ಪಟ್ಟು ಹೆಚ್ಚು ಇದ್ದಿರುವ ಸಾಧ್ಯತೆ ಇದೆ.
ಮಳೆ-ಪ್ರವಾಹದಿಂದ ಹಾನಿ ಆಗುವುದು ಹೊಸತೇನೂ ಅಲ್ಲ. ಸರಕಾರದ ಅಂದಾಜಿನಂತೆ, 2019ರಿಂದ 2021ರವರೆಗೆ ಮೂರು ವರ್ಷಗಳಲ್ಲಿ ಮಳೆ ಯಿಂದ ಆಗಿರುವ ಒಟ್ಟಾರೆ ನಷ್ಟ ? 2 ಲಕ್ಷ ಕೋಟಿ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿ ಪ್ರಕಾರ ಸುಮಾರು ? 55 ಸಾವಿರ ಕೋಟಿ ಯಷ್ಟು ನಷ್ಟವು ಬೆಳೆ ಹಾಗೂ ಮನೆಗಳ ಹಾನಿಯಿಂದ ಆಗಿದೆ.
ಕೇಂದ್ರ ಸರಕಾರವು ಸುಮಾರು ? 4200 ಕೋಟಿಯಷ್ಟು ಪರಿಹಾರವನ್ನು ರಾಜ್ಯಕ್ಕೆ ನೀಡಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಗಳ ಕಷ್ಟಕ್ಕೆ ಹೆಗಲುಕೊಟ್ಟು, ಆಸರೆಯಾಗಬೇಕಾದ ಕೇಂದ್ರ ಸರಕಾರವು ಇದರಿಂದ ನುಣುಚಿಕೊಳ್ಳುತ್ತಲೇ ಇದೆ. ರಾಜ್ಯ ಗಳಲ್ಲಿನ ಮಳೆಹಾನಿ ಪರಿಶೀಲಿಸಿ ಪರಿಹಾರ ಕೊಡಿಸುವ ಹೊಣೆಗಾರಿಕೆಯಿಂದ ಕೇಂದ್ರ ಸರಕಾರವು ನುಣುಚಿ ಕೊಳ್ಳಬಾರದು. ಕೂಡಲೇ ಅಧ್ಯಯನ ತಂಡವೊಂದನ್ನು ರಚಿಸಿ, ಅವರಿಂದ ತುರ್ತು ವರದಿ ತರಿಸಿ ಪರಿಹಾರ ಘೋಷಣೆ ಮಾಡಬೇಕು.
ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ರಾಜ್ಯಕ್ಕೆ ಪರಿಹಾರದ ಹಣ ತಂದುಕೊಡಲು ಶ್ರಮಿಸಬೇಕು. ರಾಜ್ಯ ಸರಕಾರವು ಅಲ್ಲಿಯವರೆಗೆ ಕಾಯದೇ ಪರಿಹಾ ಕಾರ್ಯಗಳಿಗೆ ಚುರುಕು ಮುಟ್ಟಿಸ ಬೇಕು. ಸಂತ್ರಸ್ತರಿಗೆ ಆಸರೆಯಾಗಿ ನಿಲ್ಲಬೇಕು.