ಮಳೆಯಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾಹುತ
ಈ ಹಿಂದೆ ಮಳೆಗಾಲ ಪ್ರಾರಂಭವಾಯಿತೆಂದರೆ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿಬೆಂಗಳೂರಿನಂತಹ ನಗರಗಳಲ್ಲಿ ಮಳೆ ಎಂದರೆ ಜನರು ಭಯಬೀಳುವಂತಾಗಿದೆ.
ಹತ್ತು ಹದಿನೈದು ನಿಮಿಷಗಳ ಮಳೆಗೂ ಅನಾಹುತ ಸೃಷ್ಟಿಯಾಗುತ್ತಿವೆ. ಆಗಸದಲ್ಲಿ ಮೋಡಕವಿದ ವಾತಾವರಣ ನಿರ್ಮಾಣ ವಾದರೆ ಹವಾಮಾನ ತಜ್ಞರು ಕಣ್ಣುಬಿಟ್ಟು ಕೊಂಡು ನೋಡುವ ಪರಿಸ್ಥಿತಿ ಉಂಟಾಗಿದೆ. ಎಷ್ಟೇ ಮಳೆ ಬಿದ್ದರೂ ಆ ಮಳೆ ನೀರನ್ನು ಮುಂದಕ್ಕೆ ಹರಿಸಬೇಕಾದರೆ ಜಲಾನಯನ, ಹಳ್ಳಕೊಳ್ಳ, ಝರಿ, ನದಿಗಳು ಬೇಕೇ ಬೇಕು. ಆದರೆ ಬೆಂಗಳೂರಿನಂತಹ ಮಹಾನಗರ ಗಳಲ್ಲಿ ಕೆರೆಗಳು, ಹಳ್ಳಕೊಳ್ಳಗಳು ಇರುವ ಜಾಗದಲ್ಲಿ ಗಗನಚುಂಬಿ ಕಟ್ಟಡಗಳು ತಲೆ ಎತ್ತಿವೆ.
ಒಂದು ಕಾಲದಲ್ಲಿ ಒಟ್ಟು 920 ಕೆರೆ, ಸರೋವರಗಳಿದ್ದು ಕಾಲಾನಂತರದಲ್ಲಿ ಅವುಗಳ ಸಂಖ್ಯೆ ಕ್ಷೀಣಿಸುತ್ತಾ ಹೋಗಿ 1940-50ರ ದಶಕದಲ್ಲಿ 280 ಕೆರೆಗಳು ಮಾತ್ರ ಉಳಿದು ಕೊಂಡಿದ್ದವು. 1995ರಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿದ್ದ 51 ಮುಖ್ಯ ಕೆರೆಗಳಲ್ಲಿ ಈಗ 17 ಕೆರೆಗಳು ಮಾತ್ರ ಉಳಿದುಕೊಂಡಿವೆ ಎನ್ನಲಾಗಿದೆ. ತೆರೆದ ಚರಂಡಿಗಳು ಮತ್ತು ಅಳಿದುಳಿದ ರಾಜಕಾಲುವೆಗಳ ಮೂಲಕ ಮಹಾನಗರ ಸೃಷ್ಟಿಸುವ ತ್ಯಾಜ್ಯ ಹಾಗೂ ಕಾರ್ಖಾನೆಗಳು ಕಕ್ಕುವ ವಿಷಯುಕ್ತ ರಾಸಾಯನಿಕ ಗಳಿಂದಲೇ ಉಳಿದ ಕೆರೆಗಳನ್ನು ತುಂಬಿ ತುಳುಕುತ್ತಿವೆ.
ಮನುಷ್ಯನ ಈ ಅವೈಜ್ಞಾನಿಕ ಚಟುವಟಿಕೆಗಳು ಲಕ್ಷಾಂತರ ವರ್ಷಗಳಿಂದ ನಿಸರ್ಗವು ತನ್ನಿಂತಾನೇ ಕಟ್ಟಿಕೊಂಡು ಬಂದ ತನ್ನ ವಿಧಾನವನ್ನು ಛಿದ್ರಛಿದ್ರವಾಗಿಸಿಬಿಟ್ಟಿದೆ. ಕೆರೆಗಳನ್ನು ಮುಚ್ಚಿ, ರಾಜಕಾಲುವೆಗಳನ್ನು ಬಂದ್ ಮಾಡಿದರೆ ಏನಾಗುತ್ತದೆ ಎಂಬುದು ಈಗ ಬೆಂಗಳೂರಿಗರಿಗೆ ಅರ್ಥವಾಗಿದೆ. ಆದರೆ ಏನೂ ಪ್ರಯೋಜನವಿಲ್ಲ. ಯಾಕೆಂದರೆ ಎಲ್ಲವೂ ಕೈಮೀರಿ ಹೋಗಿದೆ. ಅಳಿದುಳಿದ ಕೆರೆಗಳ ಅಂಚುಗಳಲ್ಲಿ ಮತ್ತು ಕೆರೆಗಳು ಕೋಡಿ ಹರಿಯುವ ಕೆಳಹಂತಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಜನರು ಒಂದೋ ಆ ಸ್ಥಳಗಳನ್ನು ಬಿಟ್ಟು ಪಲಾಯನ ಮಾಡಬೇಕಿದೆ, ಇಲ್ಲವೇ ಪದೇ ಪದೆ ಇಂತಹ ಪರಿಸ್ಥಿತಿಗೆ ತಮ್ಮನ್ನು ತಾವು ಒಡ್ಡಿ ಕೊಂಡು ನರಳಾಡಬೇಕಾಗುತ್ತದೆ.
ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ತೀವ್ರ ಸ್ವರೂಪದ ಅನಾಹುತಗಳಿಗೆ ಒಡ್ಡಿಕೊಳ್ಳುತ್ತವೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.