ಪಿಎಸ್‌ಐ ಅಕ್ರಮ: ಯಾರನ್ನೂ ರಕ್ಷಿಸಬಾರದು
ಪಿಎಸ್‌ಐ ನೇಮಕಾತಿಗಾಗಿ ನಡೆದ ಅಕ್ರಮಗಳ ಸರಣಿ ಹೊರಬೀಳುತ್ತಲೇ ಇವೆ. ಇಷ್ಟು ದಿನ ಅಧಿಕಾರಿಗಳು ಮಾತ್ರ ಈ ಹಗರಣದಲ್ಲಿಶಾಮೀಲಾಗಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಶಾಸಕ ಬಸವರಾಜ ದಢೇಸಗೂರ ಅವರು ಪಿಎಸ್‌ಐ ನೇಮಕಾತಿ ಮಾಡಿಸಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ ?೧೫ ಲಕ್ಷ ಪಡೆದ ಬಗ್ಗೆ ಮೇಲೆ ಆರೋಪ ಕೇಳಿಬಂದಿದೆ.
ಈ ಕುರಿತು ಆಡಿಯೊ ವೈರಲ್ ಆಗಿದ್ದು, ಆಡಿಯೋದಲ್ಲಿ ಹಣವನ್ನು ಸರಕಾರಕ್ಕೆ ಕೊಟ್ಟಿ ದ್ದೇನೆ ಎನ್ನುವ ಮಾತು ಇದೆ. ಧ್ವನಿಯೂ ನನ್ನದೇ ಎಂದು ಶಾಸಕರು ಒಪ್ಪಿಕೊಂಡಿದ್ದಾರೆ. ಆದರೆ ಅದಕ್ಕೆ ಅವರು ಬೇರೆಯದೇ ಸಮಜಾಯಿಸಿ ನೀಡಿದ್ದಾರೆ. ಶಾಸಕರ ಹೇಳಿಕೆ ಗಮನಿಸಿ ದರೆ ಪೂರ್ಣ ಸರಕಾರವೇ ಹಗರಣದಲ್ಲಿ ಭಾಗಿಯಾದಂತೆ ಕಾಣುತ್ತಿದೆ. ಸರಕಾರ ಅಂದರೆ ಯಾರ ಕೈಯಲ್ಲಿ ಹಣ ಕೊಟ್ಟಿzರೆ ಎನ್ನುವುದು ಬಹಿರಂಗವಾಗಬೇಕು.
ಮೇಲ್ನೋಟಕ್ಕೆ ಈ ಹಗರಣದಲ್ಲಿ ಒಬ್ಬಿಬ್ಬರು ಮಾತ್ರ ಭಾಗಿಯಾದಂತೆ ಕಾಣುತ್ತಿಲ್ಲ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಸರಕಾರವು ಈ ಹಗರಣ ಬಗ್ಗೆ ಸಂಪೂರ್ಣ ಪಾರದರ್ಶಕ ತನಿಖೆ ನಡೆಸಬೇಕು. ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಬಂದು ಕೋಚಿಂಗ್ ಪಡೆದು, ವರ್ಷಾನುಗಟ್ಟಲೇ ಓದಿ ಲಿಖಿತ ಪರೀಕ್ಷೆಗೆ ಮತ್ತು ದೈಹಿಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ನ್ಯಾಯವಾಗಿ ನೇಮಕಾತಿಗೆ ಪ್ರಯತ್ನ ಮಾಡಿದವರೂ ಇದ್ದಾರೆ. ಎನೂ ತಪ್ಪು ಮಾಡದ ಅಂತಹ ಅಭ್ಯರ್ಥಿಗಳಿಗೆ ಈ ಅಕ್ರಮ ಜಾಲದಿಂದ ಅನ್ಯಾಯವಾಗಿದೆ. ಆದ್ದರಿಂದ ಸರಕಾರ ಅವರಿಗೆ ನ್ಯಾಯ ಕೊಡಸಲು ಮುಂದಾಗಬೇಕು.
ಪಿಎಸ್‌ಐ ಹುದ್ದೆ ಪಡೆಯಲು ಕೆಲ ಅಭ್ಯರ್ಥಿಗಳು ಜಮೀನು ಮಾರಾಟ ಮಾಡಿದ್ದರೆ, ಇನ್ನು ಕೆಲವರು ಚಿನ್ನಾಭರಣ ಅಡಮಾನ ವಿಟ್ಟು ಹಣವನ್ನು ಮಧ್ಯವರ್ತಿಗಳಿಗೆ ತಲುಪಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಇನ್ನೂ ಕೆಲ ಅಭ್ಯರ್ಥಿಗಳು ಯಾವ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿ ಕೊಟ್ಟರು ಎಂಬುದು ಗೊತ್ತಾಗಿಲ್ಲ. ಆ ಕುರಿತು ಕೂಡ ಸಂಪೂರ್ಣ ತನಿಖೆಯಾಗಬೇಕು. ಲಂಚ ಪಡೆಯುವುದು ಎಷ್ಟು ಅಪರಾಧವೋ ಲಂಚ ಕೊಡುವುದೂ ಅಷ್ಟೇ ಅಪರಾಧ. ಹೀಗಾಗಿ ಲಂಚ ಕೊಟ್ಟವರನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಸರಕಾರ ಯಾರನ್ನೂ ರಕ್ಷಿಸುವ ಕೆಲಸ ಮಾಡಬಾ ರದು.