ಬಹುಮಹಡಿ ಕಟ್ಟಡಗಳು ಇನ್ನಷ್ಟು ಉರುಳಲಿ
ಕಾನೂನುಬಾಹಿರವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪದ ಮೇಲೆ ದೆಹಲಿ ಸಮೀಪದ ನೊಯಿಡಾದಲ್ಲಿನಸೂಪರ್‌ಟೆಕ್ ಸಂಸ್ಥೆಯ ಅವಳಿ ಗೋಪುರಗಳನ್ನು ನ್ಯಾಯಾಲಯದ ಆದೇಶದನ್ವಯ ಭಾನುವಾರ ಮಧ್ಯಾಹ್ನ ನೆಲಸಮಮಾಡಲಾಯಿತು.
ಈ ಕಾರ್ಯ ಇಡೀ ದೇಶಾದ್ಯಂತ ಸದ್ದು ಮಾಡಿದ್ದು, ನ್ಯಾಯಾಲಯದ ತೀರ್ಪನ್ನು ಜನರು ಚಪ್ಪಾಳೆ ಹೊಡೆದು ಸ್ವಾಗತಿಸಿದ್ದಾರೆ. ಆದರೆ ಇಷ್ಟು ದೊಡ್ಡ ಕಟ್ಟಡಗಳನ್ನು ಕಟ್ಟಿ ಮುಗಿಸುವವರೆಗೂ ಸಂಬಂಧಪಟ್ಟ ಅಧಿಕಾರಿ ಗಳು ಏನು ಮಾಡುತ್ತಿದ್ದರು? ಅವರಿಗೆ ಯಾವ ಶಿಕ್ಷೆಯೂ ಇಲ್ಲವೇ? ಈ ದೇಶದ ಸಂಪತ್ತಿನ ನಾಶಕ್ಕೆ ಯಾರು ಹೊಣೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.
ಬೆಂಗಳೂರೂ ಸೇರಿದಂತೆ ಅದೆಷ್ಟು ನಗರಗಳಲ್ಲಿ ಈ ರೀತಿಯ ಅನುಮತಿ ಮೀರಿ ಕಟ್ಟಿದ ಕಟ್ಟಡಗಳಿವೆಯೋ ಏನೋ? ದೊಡ್ಡ ದೊಡ್ಡ ಬಿಲ್ಡರ್‌ ಗಳು ಲಕ್ಷಾಂತರ ರುಪಾಯಿ ಲಂಚ ಎಸೆದು ಅಽಕಾರಿಗಳಿಂದ ಅನುಮತಿ ಪಡೆಯುವುದೇ ಒಂದು, ವಾಸ್ತವದಲ್ಲಿ ನಿರ್ಮಾಣ ಮಾಡುವುದೇ ಮತ್ತೊಂದು ಬಗೆಯ ಕಟ್ಟಡ. ಈ ವಿಷಯದಲ್ಲಿ ಜನಸಾಮಾನ್ಯರೂ ಹಿಂದೆ ಬಂದಿಲ್ಲ. ಚಿಕ್ಕ ಚಿಕ್ಕ ಸೈಟುಗಳಲ್ಲಿ ಒಂದೆರಡು ಮಹಡಿಗಳಿಗೆ ಅನುಮತಿ ಪಡೆದು ಮೂರು-ನಾಲ್ಕು ಮಹಡಿಗಳನ್ನು ಕಟ್ಟಿ ಬಾಡಿಗೆಗೆ ದುಡ್ಡು ಮಾಡುವ ದಂಧೆಯನ್ನಾಗಿ ಮಾರ್ಪಡಿಸಿದ್ದಾರೆ.
ಇಂತಹ ಹೆಚ್ಚುವರಿ ಮಹಡಿಗಳಿಂದ ಅಲ್ಲಿ ವಾಸವಾಗಿರುವವರಿಗಷ್ಟೇ ಅಲ್ಲ ನೆರೆಹೊರೆಯವರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ನ್ಯಾಯಾಲಗಳು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ದೇಶದ ವಿವಿಧ ನಗರಗಳಲ್ಲಿ ಹೀಗೆ ಕಾನೂನುಬಾಹಿರವಾಗಿ ಕಟ್ಟಿದ ಮಹಡಿಗಳ ಸರ್ವೇ ನಡೆಸಿ, ಒಂದು ವರ್ಷದ ಒಳಗೆ ಕೆಡವುವಂತೆ ಎಲ್ಲ ರಾಜ್ಯಗಳ ಸರಕಾರಗಳಿಗೆ ಕೂಡಲೇ ಆದೇಶ ನೀಡಬೇಕು.
ಅಲ್ಲದೆ, ಸೂಪರ್‌ಟೆಕ್ ಅವಳಿ ಗೋಪುರ ನೆಲಸಮ ಪ್ರಕರಣವು ರಿಯಲ್ ಎಸ್ಟೇಟ್ ಉದ್ಯಮದ ಎಲ್ಲರಿಗೂ ಪಾಠವಾಗಬೇಕು. ಸಾರ್ವಜನಿಕರು ಕೂಡ ಬಾಡಿಗೆ ದುಡ್ಡಿನ ಆಸೆಗೆ ನಿಯಮಾವಳಿಗಳನ್ನು ಉಲ್ಲಂಸಿ ಮೂರ‍್ನಾಲ್ಕು ಮಹಡಿ ಕಟ್ಟಡಗಳನ್ನು ಕಟ್ಟಿದರೆ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.