ಒತ್ತುವರಿ ತೆರವಿನಲ್ಲಿ ಮುಲಾಜು ಬೇಡ
ರಾಜಧಾನಿ ಬೆಂಗಳೂರಿನಲ್ಲಿ ಕಂಡುಕೇಳರಿಯದ ಮಳೆಯಿಂದ ಉಂಟಾದ ಪ್ರವಾಹದ ಬೆನ್ನಲ್ಲೇ ಒತ್ತುವರಿ ತೆರವು ಕಾರ್ಯ ಚರಣೆಗೆ ರಾಜ್ಯ ಸರಕಾರ ಮುಂದಾಗಿದೆ. ತಡವಾಗಿಯಾದರೂ ಈ ಪ್ರಕ್ರಿಯೆಗೆ ಚಾಲನೆ ಕೊಟ್ಟಿರುವುದು ಸ್ವಾಗತಾರ್ಹಬೆಳವಣಿಗೆ.
ಕೆರೆ, ರಾಜಕಾಲುವೆಗಳ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಕಟ್ಟಡ ಗಳನ್ನು ಒಡೆಯುವ ಸಮಯದಲ್ಲಿ ಯಾರ ಮುಲಾಜಿಗೂ ಬಿಬಿಎಂಪಿ ಅಥವಾ ಅಧಿಕಾರಿಗಳು ಬೀಳಬಾರದು. ಒತ್ತುವರಿ ಕಾರ್ಯಚರಣೆ ಆರಂಭವಾದ ಸಮಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ಇದೇ ಮಾತನ್ನು ಹೇಳಿದ್ದರು. ಆರಂಭದ ಮೂರು ದಿನ ಇದೇ ರೀತಿಯಲ್ಲಿ ಕಾರ್ಯ ಚರಣೆ ನಡೆಸುವ ಮೂಲಕ, ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸ ಲಾಯಿತು.
ಆದರೀಗ ಮತ್ತೊಂದು ಸಮೀಕ್ಷೆ ನಡೆಸಿದ ಬಳಿಕ ಒತ್ತುವರಿ ತೆರವು ಕಾರ್ಯ ವನ್ನು ಮುಂದುವರಿಸುವುದಾಗಿ ಬಿಬಿಎಂಪಿ ಹೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಏಕೆಂದರೆ, ಮೊದಲ ಮೂರು ದಿನ ತೆರವು ಮಾಡಿದ್ದರಲ್ಲಿ ಬಹುತೇಕ ಮನೆ, ಕಟ್ಟಡಗಳು ಜನಸಾಮಾನ್ಯರಿಗೆ ಸೇರಿದ್ದಾ ಗಿತ್ತು. ಇದೀಗ ಐಟಿ ದೈತ್ಯ ಕಂಪನಿಗಳು, ಪ್ರತಿಷ್ಠಿತ ಶಾಲಾ-ಕಾಲೇಜು, ಬಲಾಢ್ಯರ ವಿಲ್ಲಾಗಳ ಹತ್ತಿರ ತೆರವು ಕಾರ್ಯಚರಣೆ ಬರುತ್ತಿದ್ದಂತೆ, ಕಾರ್ಯಚರಣೆಯ ವೇಗ ಕ್ಷೀಣಿಸಿರುವುದು ಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಬ್ರ್ಯಾಂಡ್‌ಗೆ ಧಕ್ಕೆ ತಂದಿರುವ ಪ್ರವಾಹಕ್ಕೆ ಮೂಲ ಕಾರಣವಾಗಿರುವುದು ಈ ಒತ್ತುವರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಈ ರೀತಿ ಕೆರೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸಾಮಾನ್ಯರ ಮನೆಗಳನ್ನು ಯಾವ ರೀತಿ ತೆರವುಗೊಳಿಸಲಾಗುವುದೋ, ಅದೇ ರೀತಿ ಬಲಾಢ್ಯರ ಕಟ್ಟಡಗಳನ್ನು ತೆರವುಗೊಳಿಸಬೇಕು. ಮೊದಲ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದಂತೆ, ಯಾರ ಮುಲಾಜಿಗೂ ಬೀಳದೇ ಒತ್ತುವರಿ ಕಾರ್ಯವನ್ನು ಮುಂದುವರಿಸಬೇಕು.
ಇದರೊಂದಿಗೆ ಜನಸಾಮಾನ್ಯರು ಮಾಡಿಕೊಂಡಿರುವ ಒತ್ತುವರಿ ತೆರವುಗೊಳಿಸದೇ ಬದಲಿ ವ್ಯವಸ್ಥೆಗೆ ಅವಕಾಶವಿದ್ದರೆ, ಆ ಬಗ್ಗೆಯೂ ಯೋಚಿಸಬೇಕು.