ಸಾಮರಸ್ಯ ಇಲ್ಲದೆ ಯಾತ್ರೆ ವಿಫಲ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತವನ್ನು ಜೋಡಿಸುವ ನಿಟ್ಟಿನಲ್ಲಿ ಭಾರತ್ ಜೋಡೋ ಯಾತ್ರೆಯನ್ನುಹಮ್ಮಿಕೊಂಡಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಇಬ್ಬರು ನಾಯಕರ ನಡುವಿನ ಶೀತಲ ಸಮರ ತೀವ್ರಗೊಳ್ಳುತ್ತಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯ ಈಗ ಬಹಿರಂಗ ವಾಗಿಯೇ ಸ್ಫೋಟಗೊಳ್ಳುತ್ತಿವೆ. ಭಾರತ್ ಜೋಡೋ ಯಾತ್ರೆಯು ಸೆ.30ರಂದು ಕರ್ನಾಟಕಕ್ಕೆ ಯಾತ್ರೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭರ್ಜರಿ ತಯಾರಿಗಳು ನಡೆಯುತ್ತಿವೆ.
ಬಳ್ಳಾರಿಯಲ್ಲಿ ಅಕ್ಟೋಬರ್ 19 ರಂದು ನಡೆಯಲಿರುವ ಸಮಾವೇಶಕ್ಕೆ ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸಬೇಕು, ಸಿದ್ದರಾಮೋತ್ಸವಕ್ಕಿಂತಲೂ ಯಶಸ್ವಿಯಾಗಿ ಭಾರತ್ ಜೋಡೋ ಯಾತ್ರೆಯನ್ನು ಯಶಸ್ಸುಗೊಳಿಸ ಬೇಕು, ಆ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಹೊರತುಪಡಿಸಿಯೂ ಕಾಂಗ್ರೆಸ್‌ನಲ್ಲಿ ಗಟ್ಟಿ ನಾಯಕರು ಇದ್ದಾರೆ ಎಂಬುದನ್ನು ಸಾಬೀತು ಪಡಿಸಬೇಕು ಎಂಬ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಧಿವೇಶನಕ್ಕೂ ಆಗಮಿಸದೆ ಪಾದ ಯಾತ್ರೆಯ ಯಶಸ್ಸಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.
ಆದರೆ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಅಭಿಪ್ರಾಯಗಳು ಸಿದ್ದು ಬಣವನ್ನು ಕೆರಳಿಸಿದೆ. ಇತ್ತೀಚೆಗೆರಾಯಚೂರಿನಲ್ಲಿ ಹಾಕಲಾಗಿದ್ದ ಫ್ಲಾಕ್ಸ್‌ನಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಾಕದೇ ಇರುವುದು ಹಾಗೂ ಇದನ್ನು ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದರ ಬಗ್ಗೆಯೂ ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನಗಳು ವ್ಯಕ್ತವಾಗಿವೆ. ಈ ಅಸಮಾಧಾನವು ಇನ್ನಷ್ಟು ತೀವ್ರಗೊಂಡರೆ ಭಾರತ್ ಜೋಡೋ ಯಾತ್ರೆಯನ್ನು ಕರ್ನಾಟಕದಲ್ಲಿ ವಿಫಲಗೊಳಿಸುವಸಾಧ್ಯತೆಯೂ ಇದೆ. ದೇಶದಲ್ಲೇ ಪ್ರಬಲ ಕಾಂಗ್ರೆಸ್ ನಾಯಕರು ಇರುವುದು ಕರ್ನಾಟಕದಲ್ಲೇ ಎಂಬುದು ದೆಹಲಿ ವಲಯದಲ್ಲಿ ಕೇಳಿಬರುವ ಸಹಜ ಮಾತು.
ಆದರೆ ಇದೀಗ ಪಕ್ಷದ ಇಬ್ಬರು ಘಟನಾನುಘಟಿ ನಾಯಕರ ಭಿನ್ನಾಭಿಪ್ರಾಯದಿಂದ ಆ ಮಾತು ಸುಳ್ಳಾಗುವ ಸಾಧ್ಯತೆ ಇದೆ. ಆದ್ದರಿಂದ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಹೈಕಮಾಂಡ್ ಈ ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿ, ಯಾತ್ರೆ ಕೈಗೊಂಡರೆ ಯಶಸ್ಸು ಆಗುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಇಡೀ ದೇಶಾದ್ಯಂತ ಯಾತ್ರೆಯ ಮೇಲೆಇದರ ಪರಿಣಾಮ ಬೀರುವ ಸಾಧ್ಯತೆ ಇದೆ.