ನಮ್ಮ ಕ್ಲಿನಿಕ್‌ಗೆ ಹಿನ್ನಡೆ ಸಾಧ್ಯತೆ
ರಾಜ್ಯ ಸರಕಾರದ ಬಹು ನಿರೀಕ್ಷಿತ ಯೋಜನೆಯಾದ ‘ನಮ್ಮ ಕ್ಲಿನಿಕ್ ’ಗೆ ನೇಮಕ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ಖಾಲಿಇರುವ ಹುದ್ದೆಗಳಿಗೆ ತಕ್ಕಂತೆ ಅರ್ಜಿಗಳು ಬರುತ್ತಿಲ್ಲ, ಕಡಿಮೆ ಸಂಬಳ ನಿಗದಿಪಡಿಸಿರುವುದರಿಂದಲೇ ಅನೇಕರು ಅರ್ಜಿ ಹಾಕಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ.
ನಮ್ಮ ಕ್ಲಿನಿಕ್ ವೈದ್ಯರಿಗೆ ಎಂಬಿಬಿಎಸ್ ಪದವಿ ಕಡ್ಡಾಯಗೊಳಿಸಲಾಗಿದೆ. ರಾಜ್ಯದ ನಾನಾಜಿಲ್ಲೆಗಳಲ್ಲಿಅರ್ಜಿ ಆಹ್ವಾನಿಸಿ ಸಂದರ್ಶನ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಆದರೆ ಬಹುತೇಕ ಕಡೆಗಳಲ್ಲಿ ಎಂಬಿಬಿಎಸ್ ಪದವೀ ಧರರು ಅತಿ ಕಡಿಮೆ ವೇತನ ನಿಗದಿಪಡಿಸಲಾಗಿದೆ ಎಂಬ ಕಾರಣದಿಂದ ಸಂದರ್ಶನದಲ್ಲಿ ಪಾಸಾಗಿದ್ದರೂ ಕರ್ತವ್ಯಕ್ಕೆ ನಿಯೋಜನೆಗೊಳ್ಳುತ್ತಿಲ್ಲ.
ಈಗಾಗಲೇ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯಾಧಿಕಾರಿ ಗಳಿಗೆ ಸರಕಾರ 60 ಸಾವಿರ ರು. ವೇತನ ನೀಡುತ್ತಿದೆ. ಎಂಬಿಬಿಎಸ್ ವೈದ್ಯರು ಇಲ್ಲದೇ ಇರುವಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರಾದರೆ ಗ್ರಾಮೀಣ ಭಾಗದಲ್ಲಿ 45 ಸಾವಿರ ರು. ವೇತನ ನೀಡಲಾಗುತ್ತಿದೆ. ಆದರೆ ಹೊಸದಾಗಿ ಆರಂಭವಾಗಲಿರುವ ನಮ್ಮ ಕ್ಲಿನಿಕ್ ವೈದ್ಯರಿಗೆ ಇದಕ್ಕಿಂತಲೂ ಕಡಿಮೆ ವೇತನ ನಿಗದಿಪಡಿಸಿರುವುದು ಗೊಂದಲ ಗಳಿಗೆ ಕಾರಣವಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಗುತ್ತಿಗೆ ಎಂಬಿಬಿಎಸ್ ವೈದ್ಯರಿಗೆ 2014ರಲ್ಲಿ 25 ಸಾವಿರ ರು. ಇದ್ದ ವೇತನವನ್ನು 30 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಆದರೂ ಈ ವೇತನ ಕಡಿಮೆ ಎಂದು ಇಡೀ ರಾಜ್ಯಾದ್ಯಂತ ಗುತ್ತಿಗೆ ವೈದ್ಯರು ಮುಷ್ಕರಹೂಡಿದ್ದರು. ಆ ಬಳಿಕ 2015-16ರಲ್ಲಿ ಎಂಬಿಬಿಎಸ್ ವೈದ್ಯರಿಗೆ 45 ಸಾವಿರ ರು. ನಿಗದಿಪಡಿಸಲಾಗಿತ್ತು. ಆ ಬಳಿಕ ಕೋವಿಡ್ ಸಂದರ್ಭದಲ್ಲಿ ವೈದ್ಯರ ಸೇವೆಯನ್ನು ಪರಿಗಣಿಸಿ ಗುತ್ತಿಗೆ ವೈದ್ಯರ ವೇತನವನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಇತರ ಸರಕಾರಿ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ಇತರ ಸಿಬ್ಬಂದಿ ವೇತನವನ್ನೂಸರಕಾರ ಪರಿಷ್ಕರಿಸಿತ್ತು.
ಇಷ್ಟಾಗಿಯೂ ವೇತನ ತಾರತಮ್ಯದ ಬಗ್ಗೆ ಇಲಾಖೆ ಒಳಗಡೆ ಆಗಾಗ ಅಪಸ್ವರಗಳು ಕೇಳುತ್ತಲೇ ಇವೆ. ಈ ನಡುವೆ ನಮ್ಮ ಕ್ಲಿನಿಕ್ ಗಳಿಗೆ ಕಡಿಮೆ ವೇತನ ನಿಗದಿಪಡಿಸಿದ್ದು, ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯೊಂದು ಆರಂಭದಲ್ಲೇ ಎಡವಿದೆ.