ಪಾವತಿ ಪಾರ್ಕಿಂಗ್: ಏಕೆ?
ಬಿಬಿಎಂಪಿ ತನ್ನ ಎಂಟು ವಲಯಗಳಲ್ಲಿ ಪಾವತಿ ಪಾರ್ಕಿಂಗ್ ಅಳವಡಿಸಲು ಮುಂದಾಗಿದ್ದು, ಇದಕ್ಕಾಗಿ ಈಗಾಗಲೇ ಒಂದು ಸುತ್ತಿನ ಟೆಂಡರ್ ಕರೆಯಲಾಗಿದೆ. ಆದರೆ ಈಗಾಗಲೇ ಪ್ರತಿಯೊಂದಕ್ಕೂ ಪಾವತಿ ಮಾಡಿ ಬಸವಳಿದ ಬೆಂಗಳೂರಿನ ಜನರ ಜೇಬಿಗೆಮತ್ತೊಂದು ಹೊರೆ ಬೀಳಲಿದೆ.
ರಸ್ತೆ ಬದಿ ವಾಹನ ನಿಲ್ಲಿಸುವುದಕ್ಕೂ ಪ್ರಿಪೇಯ್ಡ ಶುಲ್ಕ ವಿಧಿಸುವ ನೂತನ ಪಾರ್ಕಿಂಗ್ ನೀತಿಯು ಸಾಮಾನ್ಯ ವಾಹನ ಸವಾರರಿಗೆ ಭಾರೀ ಹೊರೆಯಾಗಲಿದೆ. ಪ್ರತಿ ಗಂಟೆಗೆ 15ರಿಂದ 30 ರುಪಾಯಿವರೆಗೆ ಪಾರ್ಕಿಂಗ್ ಶುಲ್ಕ ವಿಧಿಸುವುದರಿಂದ ಬಡ ಹಾಗೂ ಮಧ್ಯಮ ವರ್ಗದ ವಾಹನ ಸವಾರರ ಆದಾಯದ ದೊಡ್ಡ ಪಾಲು ಈ ಶುಲ್ಕ ಪಾವತಿಸ ಲೆಂದೇ ಖರ್ಚಾಗಲಿದೆ.
ಇದರೊಂದಿಗೆ ತಮ್ಮ ಮನೆ ಮುಂದೆ ಕಾರು ಪಾರ್ಕಿಂಗ್ ಮಾಡುವುದಕ್ಕೂ 3000 ರಿಂದ 5000 ರುಪಾಯಿ ನೀಡಿ ಪರವಾನಗಿ ಪಡೆಯ ಬೇಕೆಂಬ ನಿಯಮ ರೂಪಿಸಲಾಗಿದೆ.
ವಾಹನ ಸವಾರರಿಗೆ ನೆರವಾಗುವಂತಹ ನೀತಿ ರೂಪಿಸುವ ಬದಲು ಅವರ ಜೇಬಿಗೆ ಕತ್ತರಿ ಹಾಕಲು ಈ ನೀತಿ ರೂಪಿಸಿದಂತಾಗಿದೆ. ಪಾವತಿ ಪಾರ್ಕಿಂಗ್ ಮೂಲಕ ವಾರ್ಷಿಕವಾಗಿ ಸುಮಾರು 200 ಕೋಟಿ ರು. ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎನ್ನಲಾಗಿದೆ. ಒಂದು ವೇಳೆ ನಿರೀಕ್ಷಿತ ಗುರಿ ಮುಟ್ಟದಿದ್ದರೆ, ಈಗ ಹತ್ತು ಇಪ್ಪತ್ತು ಇರುವ ಪಾರ್ಕಿಂಗ್ ಶುಲ್ಕ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಒಟ್ಟಾರೆ ಮುಂಬರುವ ದಿನಗಳಲ್ಲಿ ಇದೊಂದು ದೊಡ್ಡ ದಂಧೆಯಾಗಿ ಮಾರ್ಪಾಡಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಅಲ್ಲದೆ, ಈ ಸಂಬಂಧ ರಜಾದಿನ ಭಾನುವಾರ ಸಹ ಟೆಂಡರ್ ಕರೆದಿರು ವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸರಕಾರದ ಕೆಟಿಪಿಪಿ ಕಾಯಿದೆ ಪ್ರಕಾರ ಟೆಂಡರ್‌ಗೆ 40 ದಿನಗಳ ಕಾಲಾವಕಾಶ ನೀಡಬೇಕು. ಆದರೂ ಪಾವತಿ ಪಾರ್ಕಿಂಗ್ ಟೆಂಡರ್‌ಗೆ ಕೇವಲ ೧೫ ದಿನಗಳ ಕಾಲಾವಕಾಶ ನೀಡಲಾಗಿದೆ. ಎಂಟು ವಲಯಗಳಲ್ಲೂ ಎಂಟು ಗುತ್ತಿಗೆದಾರರನ್ನು ಪೂರ್ವ ನಿಗದಿ ಮಾಡಿಕೊಂಡಿದ್ದು, ಕೇವಲ ನಾಮಕಾವಸ್ತೆಗಾಗಿ ಟೆಂಡರ್ ಕರೆಯಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಬಿಬಿಎಂಪಿಯು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಹಾಗೂ ರಸ್ತೆಗುಂಡಿ ಸಮಸ್ಯೆಯನ್ನು ಬಗೆಹರಿಸುವ ಬದಲು ಜನರಿಂದ ವಸೂಲಿ ಮಾಡಲು ಮಾತ್ರ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ.