ದಲಿತ ಬಾಲಕನಿಗೆ ಬಹಿಷ್ಕಾರ ಖಂಡನೀಯ
ಕೋಲಾರಜಿಲ್ಲೆಯಮಾಲೂರು ತಾಲೂಕಿನ ಉಳ್ಳೇರಹಳ್ಳಿಯ ಗ್ರಾಮ ದೇವತೆಯ ಮೆರವಣಿಗೆಯ ಸಂದರ್ಭದಲ್ಲಿ ದೇವತೆಯ ಗುಜ್ಜುಕೋಲು ಮುಟ್ಟಿದನೆಂಬ ಕಾರಣಕ್ಕೆ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಚೇತನ್ ಎಂಬ ಬಾಲಕನನ್ನು ಆ ಊರಿನ ಪ್ರಬಲ ಸಮುದಾಯಕ್ಕೆ ಸೇರಿದ ಕೆಲವರು ಹೊಡೆದಿರುವುದು ಮತ್ತು ಆತನ ಕುಟುಂಬಕ್ಕೆ ? ೬೦ ಸಾವಿರ ದಂಡ ವಿಧಿಸಿ, ಬಹಿಷ್ಕಾರದಬೆದರಿಕೆ ಹಾಕಿರುವುದು ಖಂಡನೀಯ.
ಬಸವಣ್ಣ, ಕನಕದಾಸ, ಕುವೆಂಪು ಅವರಂಥ ದಾರ್ಶನಿಕ ವ್ಯಕ್ತಿತ್ವವುಳ್ಳವರು ಹುಟ್ಟಿರುವ ನಮ್ಮ ಕನ್ನಡ ನಾಡಿನಲ್ಲಿ ಇಂಥ ಬಾಲಿಶ ಹಾಗೂ ಅಸಹನೀಯ ಘಟನೆಗಳು ಸಂಭವಿ ಸುತ್ತಿರುವುದು ಇಡೀ ನಾಗರಿಕ ಸಮುದಾಯವೇ ತಲೆ ತಗ್ಗಿಸುವಂತೆ ಮಾಡಿವೆ. ಮಕ್ಕಳನ್ನು ದೇವರ ರೂಪದಲ್ಲಿ ನೋಡುವ ಸಮಾಜದಲ್ಲಿ, ಬಾಲಕನೊಬ್ಬನ ಸ್ಪರ್ಶದಿಂದ ದೇವರಿಗೇ ಮೈಲಿಗೆಯಾಗುತ್ತದೆ ಎಂದು ನಂಬಿರುವ ಮನಸ್ಸುಗಳು ನಿಜಕ್ಕೂ ರೋಗಗ್ರಸ್ಥವಾಗಿವೆ.
ಹಿರಿಯರಾದವರು ಮಕ್ಕಳ ಮನಸ್ಸಿನಲ್ಲಿ ಪ್ರೇಮ ಮತ್ತು ಸಹಬಾಳ್ವೆಗೆ ಅವಕಾಶವಿರುವ ಸಮಾಜದ ಚಿತ್ರಣವನ್ನು ಮೂಡಿಸಬೇಕೇ ಹೊರತು, ಒಡಕಿನ ಬಿಂಬಗಳನ್ನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜಕ್ಕೆ ಅನಿಷ್ಟವಾದ ಆಚರಣೆಗಳಿಗೆ ಅವಕಾಶವಿಲ್ಲ. ಇಂತಹ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಬೇಕು. ಜತೆಗೆ, ಸಮಾಜವನ್ನು ಮಾನವೀಯಗೊಳಿಸುವ ಪ್ರಯತ್ನಗಳೂ ವ್ಯಾಪಕವಾಗಿ ನಡೆಯಬೇಕು.
ಜಾತಿ ಶ್ರೇಷ್ಠತೆಯ ವ್ಯಸನಕ್ಕೊಳಗಾದವರು ಕಾನೂನನ್ನು ಕೈಗೆ ತೆಗೆದುಕೊಂಡು ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ನಡೆಸುವ ಪ್ರಕರಣಗಳು ಕೊನೆಯಾಗಬೇಕು. ಸಾಮಾಜಿಕ ಬಹಿಷ್ಕಾರ ಹಾಕುವ ಹಾಗೂ ದಂಡ ವಿಧಿಸುವ ಸರ್ವಾಧಿಕಾರ ನಡೆಯನ್ನು ಯಾವ ಹಳ್ಳಿಗಳಲ್ಲೂ ಕೈಗೊಳ್ಳದಂತೆ ಪೊಲೀಸರು ಕ್ರಮ ವಹಿಸಬೇಕು. ಆ ಮೂಲಕ ಇಂಥ ನೀಚ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕು.
ವೈಜ್ಞಾನಿಕ, ವೈಚಾರಿಕ ಮನೋಭಾವವುಳ್ಳವರು ಗ್ರಾಮೀಣ ಪ್ರದೇಶಗಳಲ್ಲಿ ವೈಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜಾತೀಯತೆಯನ್ನು ಹೋಗಲಾಡಿಸುವ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಶಾಲೆಗಳು ಮಕ್ಕಳ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಬೇಕು. ಕುಡಿಯುವ ನೀರು, ಆಹಾರ, ಮಾಡುವ ವೃತ್ತಿ ಸೇರಿದಂತೆ ಬೇರೆ ಬೇರೆಸಂದರ್ಭಗಳಲ್ಲಿ ಜಾತಿಯನ್ನು ಹೆಸರಿಸಿ ಸಾರ್ವಜನಿಕವಾಗಿ ಅವಮಾನಿಸುವ ಘಟನೆಗಳು ಇನ್ನೆಂದೂ ಮರುಕಳಿಸದಂತೆ ನೋಡಿಕೊಳ್ಳಬೇಕು.