ಚರ್ಮಗಂಟು ರೋಗ: ಬೇಗ ಲಸಿಕೆ ಬರಲಿ
ಕಳೆದ ಎರಡು ತಿಂಗಳಿಂದ ರಾಜ್ಯಾದ್ಯಂತ ಜಾನುವಾರುಗಳಲ್ಲಿ ಚರ್ಮಗಂಟು ರೋಗದ (ಲಂಪಿ ಸ್ಕಿನ್ ಡಿಸೀಸ್) ಕಾಣಿಸಿ ಕೊಂಡಿದ್ದು, ರೈತರು, ಜಾನುವಾರ ಸಾಕಣೆದಾರರು ಆತಂಕಗೊಂಡಿದ್ದಾರೆ.
ರಾಜ್ಯದಲ್ಲಿ 3800ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಈಗಾಗಲೇ ಈ ರೋಗ ಕಾಣಿಸಿ ಕೊಂಡಿದೆ. ಒಂದು ಹಸುವಿನಲ್ಲಿ ರೋಗ ಕಾಣಿಸಿಕೊಂಡ ಕೂಡಲೇ ಇತರ ಜಾನುವಾರು ಗಳಿಗೂ ತಕ್ಷಣ ಹರಡುತ್ತದೆ. ಕೆಲ ರೈತರು ಇದನ್ನು ಬೇಗ ಗುರುತಿಸದ ಕಾರಣ ಹೆಚ್ಚಿನ ಜಾನುವಾರುಗಳು ರೋಗಕ್ಕೆ ತುತ್ತಾಗಿ, ಮೃತಪಟ್ಟಿವೆ. ಈವರೆಗೂ ಈ ರೋಗಕ್ಕೆ ನಿರ್ದಿಷ್ಟ ಲಸಿಕೆ ಕಂಡು ಹಿಡಿದಿಲ್ಲ.
ಕಳೆದ ತಿಂಗಳು ಚರ್ಮಗಂಟು ರೋಗಕ್ಕೆ ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ)ನಿಂದ ಲಂಪಿ ಸ್ಕಿನ್ ಡಿಸೀಸ್ ನಿರೋಧಕ ಲಸಿಕೆ ಕಂಡುಹಿಡಿಯಲಾಗಿದೆ. ಆದರೆ, ಅದು ರಾಜ್ಯಕ್ಕೆ ಬರಲು ಇನ್ನೂ ೬ರಿಂದ ೭ ತಿಂಗಳ ಸಮಯ ಹಿಡಿಯಬಹುದು ಎನ್ನ ಲಾಗಿದೆ. ಲಸಿಕೆ ಬರಲು ಇಷ್ಟೊಂದು ಸಮಯ ತಗುಲಿದರೆ ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ರೋಗಬಾಧೆಗೆ ಒಳಗಾಗುವ ಆತಂಕ ಎದುರಾಗಿದೆ.
ಆದ್ದರಿಂದ ಸರಕಾರವು ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಲಸಿಕೆ ಪೂರೈಸುವಲ್ಲಿ ಕ್ರಮ ಕೈಗೊಳ್ಳಬೇಕು. ರೈತರು ಕೂಡ ತಮ್ಮ ಜಾನುವಾರುಗಳಲ್ಲಿ ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು. ನಿಶಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕಂಟುವುದು, ಜಾನುವಾರುಗಳ ಚರ್ಮದ ಮೇಲೆ 2-5 ಸೆಂ.ಮೀ.ನಷ್ಟು ಅಗಲವಿರುವ ಗುಳ್ಳೆ ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುವುದು ಕಂಡುಬಂದರೆ ಕೂಡಲೇ ಸಮೀಪದ ಪಶು ಆಸ್ಪತ್ರೆಯನ್ನು ಸಂಪರ್ಕಿಸಬೇಕು.
ರೋಗದ ಲಕ್ಷಣಗಳು ಕಂಡುಬಂದರೆ ಜಾನುವಾರುಗಳ ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕುವುದು ಹಾಗೂತಂಪಾದ ಜಾಗದಲ್ಲಿ ಕಟ್ಟುವುದು. ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಶಿಯಂ ಪರಮಾಂಗನೇಟ್ ದ್ರವಣದಿಂದ ತೊಳೆದುಐಯೋಡಿನ್ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸುವುದು, ರೋಗ ಹರಡುವುದನ್ನು ತಡೆಯಲು ರೋಗಗ್ರಸ್ಥಜಾನುವಾರುಗಳನ್ನು ಬೇರ್ಪಡಿಸುವುದು. ರೋಗಗ್ರಸ್ಥ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲಾ ಸಾಮಗ್ರಿಗಳನ್ನು ಸ್ವಚ್ಛ ಗೊಳಿಸುವುದು ಸೇರಿದಂತೆ ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕು.