ಪಿಎಫ್ಐ ನಿಷೇಧಿಸಿ ಮೈಮರೆಯುವಂತಿಲ್ಲ
ದೇಶದೊಳಗೆ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ಸಂಚು ನಡೆಸುತ್ತ, ಮುಸ್ಲಿಂ ಸಮುದಾಯದಲ್ಲಿ ಉಗ್ರಗಾಮಿ ಭಾವನೆಗಳನ್ನು ಬೆಳೆಸುತ್ತ ಬಂದಿದ್ದ ಹಲವು ಘಟನೆಗಳು ಸಾಕ್ಷ್ಯಾಧಾರಗಳ ಸಮೇತ ಋಜುವಾತಾಗಿರುವ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತುಅದರ ಅಂಗ ಸಂಸ್ಥೆಗಳ ಮೇಲೆ ಐದು ವರ್ಷಗಳ ಅವಧಿಗೆ ನಿಷೇಧ ಹೇರಿರುವ ಕೇಂದ್ರ ಸರಕಾರದ ಕ್ರಮ ಅತ್ಯಂತ ಸಕಾಲಿಕ.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜಕೀಯ ಲಾಭದ ಉದ್ದೇಶದಿಂದ ಅಲ್ಪ ಸಂಖ್ಯಾತ ತುಷ್ಟೀಕರಣದ ನೀತಿಯನ್ನು ಅನುಸರಿಸುತ್ತ, ಮುಸ್ಲಿಂ ಸಮುದಾಯ ಈ ದೇಶದ ಬಹುಸಂಖ್ಯಾತ ಸಮಾಜದ ಜತೆ ಒಂದಾಗಿ ಬದುಕಲು ಅವಕಾಶ ನೀಡದೆ, ಪ್ರತ್ಯೇಕತಾವಾದಿ ಭಾವನೆಗಳನ್ನೇ ಪೋಷಿಸುತ್ತ ಬಂದಿರುವ ಪರಿಣಾಮ ಈ ಉಗ್ರಗಾಮಿ ಚಟುವಟಿಕೆಗಳು ಆಳವಾಗಿ ಬೇರು ಬಿಡುವಂತಾಗಿದೆ. ಕೆಲವು ವರ್ಷಗಳ ಹಿಂದೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಹೆಸರಿನಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸು ತ್ತಿದ್ದ ಶಕ್ತಿಗಳು ಪಿಎಫ್ಐ ಹೆಸರಿನಲ್ಲಿ ಮರುಸಂಘಟನೆ ಮಾಡಿಕೊಂಡು ಹೊಸ ಹೆಸರನ್ನು ಮಾತ್ರ ಧರಿಸಿದ್ದವು.
ಇದೀಗ ತನಿಖಾ ಸಂಸ್ಥೆಗಳು ದೇಶವ್ಯಾಪಿ ದಾಳಿಗಳನ್ನು ನಡೆಸಿ ವಿಧ್ವಂಸಕ ಕೃತ್ಯಗಳ ಸಂಚುಕೋರರನ್ನು ಬಂಧಿಸಿದ ಬೆನ್ನಿಗೇ ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳ ನಿಷೇಧ ಆಗಿರುವುದು ಕೇಂದ್ರ ಸರಕಾರವು ಆಂತರಿಕ ಭದ್ರತೆಗೆ ನೀಡುತ್ತಿರುವ ಆದ್ಯತೆ ಮತ್ತು ದಿಟ್ಟತನದ ಕ್ರಮಗಳ ದ್ಯೋತಕವಾಗಿದೆ.
ಆದರೆ, ಸಂಘಟನೆ ಗಳನ್ನು ನಿಷೇಧಿಸಿದ ಮಾತ್ರಕ್ಕೆ ಅವುಗಳಲ್ಲಿ ತೊಡಗಿಕೊಂಡವರ ಮನಃಸ್ಥಿತಿ ಬದಲಾಗುತ್ತದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಹೊಸ ಹೆಸರಿನಲ್ಲಿ, ಹೊಸ ವೇಷದಲ್ಲಿ ತ್ಮ ಚಟುವಟಿಕೆಗಳನ್ನು ಮುಂದುವರಿಸುವ ಸಾಧ್ಯತೆಗಳು ಇದ್ದೇ ಇವೆ. ಎಲ್ಲಕ್ಕಿಂತ ಸೋಜಿಗವೆಂದರೆ, ನಿಷೇಧ ಹೇರಿದ ಬೆನ್ನಲ್ಲೇ ಪಿಎಫ್ಐ ತನ್ನ ಸಂಘಟನೆಯನ್ನೇ ವಿಸರ್ಜಿಸಿದೆ. ಜತೆಗೆ ’ಮಹಾನ್ ದೇಶದ ಮಹಾನ್ ಕಾನೂನು ಪರಿಪಾಲಕ’ ತಾನು ಎಂದು ಹೇಳಿಕೊಂಡಿದೆ. ಇದು ಉಗ್ರಗಾಮಿ ಶಕ್ತಿಗಳು ರಂಗೋಲಿ ಕೆಳಗೆ ತೂರಿಕೊಳ್ಳುವ ಚಾಣಾಕ್ಷತೆಯನ್ನು ಪ್ರದರ್ಶಿಸುತ್ತಿರುವುದರ ಸಂಕೇತ ಎಂದರೂ ತಪ್ಪಲಾಗಲಿಕ್ಕಿಲ್ಲ.
ಇಂತಹ ಚಾಣಾಕ್ಷ ನಡೆಗಳು ಮತ್ತು ವಿಧ್ವಂಸಕ ಸಂಚುಕೋರರ ಮುಂದಿನ ಕಾರ್ಯತಂತ್ರಗಳ ಬಗ್ಗೆ ದೇಶದ ಕಾನೂನು ವ್ಯವಸ್ಥೆ ಕಟ್ಟೆಚ್ಚರದಿಂದ ಇರಲೇಬೇಕಾದ ಅನಿವಾರ್ಯತೆ ಇದೆ.