ಜವಾಬ್ದಾರಿ ಬಿಟ್ಟು ಅಧಿಕಾರಕ್ಕೆ ಬಂದರೆ ಏನು ಪ್ರಯೋಜನ?
ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ’ಭಾರತ್ ಜೋಡೊ ಯಾತ್ರೆ’ ಶುಕ್ರವಾರ ಕರ್ನಾಟಕವನ್ನು ಪ್ರವೇಶಿಸಿದೆ.
ರಾಜ್ಯದಲ್ಲಿ ಭಾರೀ ಸದ್ದು ಮಾಡಲಿದ್ದು, ಒಂದಿಷ್ಟು ದಿನ ಕಾಂಗ್ರೆಸ್ ಗಾಳಿ ಬೀಸಬಹುದು. ಈ ಯಾತ್ರೆ ಹೋದಲ್ಲೆಲ್ಲಾ ಕಾಂಗ್ರೆಸ್ ಗಾಳಿ ಬೀಸುವುದು ಸಹಜವೇ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೋ, ಬಿಡುತ್ತೋ ಗೊತ್ತಿಲ್ಲ. ಆದರೆ ಈ ಯಾತ್ರೆ ಮಾತ್ರ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವಲ್ಲಿ ಖಂಡಿತ ಸಹಾಯ ಮಾಡಬಲ್ಲದು. ಈ ಕಡೆ ಯಶಸ್ವಿ ಯಾತ್ರೆ ನಡೆಯುತ್ತಿರುವಾಗಲೇ ಆ ಕಡೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿರುಸಿನ ಚುನಾವಣೆ ನಡೆಯುತ್ತಿದ್ದು, ಆ ಚುನಾವಣೆಯಿಂದ ರಾಹುಲ್ ಗಾಂಧಿ ಹೊರಗುಳಿ ದಿದ್ದಾರೆ.
ಒಂದೆಡೆ ಪಕ್ಷದ ಚುಕ್ಕಾಣಿಯನ್ನು ಬೇರೆಯವರ ಕೈಗೆ ನೀಡಿ, ಮತ್ತೊಂದೆಡೆ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿರುವ ರಾಹುಲ್ ಗಾಂಧಿ ಅವರ ಉದ್ದೇಶವಾದರೂ ಏನು ಎಂಬುದು ಕಾಂಗ್ರೆಸ್ ನಾಯಕರಿಗೇ ಪ್ರಶ್ನೆಯಾಗಿದೆ. ರಾಜಕಾರಣದಲ್ಲಿ ಪ್ರಬಲ ನಾಯಕನಾಗ ಬೇಕಾದವನು ಮೊದಲು ಪಕ್ಷದ ಮೇಲೆ, ಪಕ್ಷದ ಮುಖಂಡರು, ಕಾರ್ಯ ಕರ್ತರ ಮೇಲೆ ಹಿಡಿತ ಸಾಧಿಸಬೇಕು. ರಾಜಕಾರಣವೆಂದರೆ ಪಕ್ಷ, ಪಕ್ಷವೆಂದರೆ ರಾಜ ಕಾರಣ. ಆಡಳಿತ ಪಕ್ಷವೇ ಇರಲಿ, ಪ್ರತಿಪಕ್ಷವೇ ಇರಲಿ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾವಾ ಗಲೂ ಭಾರೀ ಪೈಪೋಟಿ ಇದ್ದೇ ಇರುತ್ತದೆ.
ಆದರೆ ರಾಹುಲ್ ಗಾಂಧಿ ಅವರ ಮನೆಯಲ್ಲೇ ಪ್ರತಿಷ್ಠಾಪನೆಯಾಗಿರುವ ಪಕ್ಷದ ಅಧ್ಯಕ್ಷಗಿರಿಯನ್ನು ಬೇರೆಯವರ ಮನೆಯಲ್ಲಿ ಪ್ರತಿಷ್ಠಾಪಿಸಿದರೆ, ರಾಹುಲ್‌ಗೆ ಈಗಿರುವ ವರ್ಚಸ್ಸು, ಬೇಡಿಕೆ ಮುಂದೆ ಉಳಿಯಲಾರದು ಎಂಬುದನ್ನು ಉಹಿಸಿದಂತಿಲ್ಲ. ಒಂದು ವೇಳೆ ಪಕ್ಷವನ್ನು ಅಧಿಕಾರಕ್ಕೆ ತಂದು ಬೇರೆಯವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಿ ‘ತ್ಯಾಗರಾಜ’ ಎಂದೆನಿಸಕೊಳ್ಳಬೇಕೆನಿದ್ದರೆ ಅದು ಕೂಡ ದಡ್ಡತನ.
ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಹುದ್ದೆಗೆ ಬೇರೆಯವರನ್ನು ಕೂರಿಸಿದರೆ ಅದು ತ್ಯಾಗವಾಗಬಹುದು. ಬೇರೆಯವರ ನೇತೃತ್ವದಲ್ಲಿ ಚುನಾವಣೆಗೆ ಹೋಗಿ, ಬಹುಮತ ಬಂದರೆ ಅಲ್ಲಿ ತ್ಯಾಗಮಾಡಲು ರಾಹುಲ್ ಬಳಿ ಏನೂ ಇರುವುದಿಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷದ ನಾಯಕಿಯರಾಗಿದ್ದ ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೇ ತಮ್ಮ ರಾಜಕೀಯ ಅಸ್ತಿತ್ವದ ಹೋರಾಟವನ್ನು ನಡೆಸಿದ್ದರು ಎಂಬುದನ್ನು ರಾಹುಲ್ ನೆನಪಿಸಿಕೊಳ್ಳಬೇಕು.