ಖಾಸಗಿ ಬಸ್‌ಗಳ ಮೇಲೆ ಹಿಡಿತವಿರಲಿ
ಪ್ರತಿ ವರ್ಷ ದಸರಾ, ದೀಪಾವಳಿ ಸಂದರ್ಭದಲ್ಲಿ ಸಾಲು ಸಾಲು ರಜೆಗಳು ಬಂದಾಗ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಸಂಚರಿಸುವ ಖಾಸಗಿ ಬಸ್‌ ಗಳ ಪ್ರಯಾಣ ದರ ಗಗನಕ್ಕೇರುತ್ತವೆ.
ಕಡಿಮೆ ಸಂಬಳಕ್ಕೆ ಬೆಂಗಳೂರಿನಲ್ಲಿ ಕೆಲಸ ಮಾಡುವ ಅನೇಕರು ಈ ಬಸ್‌ಗಳ ಪ್ರಯಾಣ ದರವನ್ನು ನೋಡಿ ಗಾಬರಿಯಾಗಿ ಊರಿಗೆ ಹೋಗುವ ಆಸೆಯನ್ನೇ ಕೈಬಿಡುತ್ತಾರೆ.
ಸಾರ್ವಜನಿಕರ ಹಬ್ಬದ ಸಂಭ್ರಮವನ್ನೇ ಕಸಿದುಕೊಳ್ಳುವ ಖಾಸಗಿ ಬಸ್ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸಾಧ್ಯ ವಿಲ್ಲವೇ? ಕಳೆದ ಎರಡ್ಮೂರು ದಿನಗಳ ಹಿಂದೆ ಸಾರಿಗೆ ಸಚಿವ ಶ್ರೀರಾಮುಲು ಅವರು, ‘ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರರ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕು.
ಇಲ್ಲದಿದ್ದರೆ ರೂಟ್ ಪರ್ಮಿಟ್ ತಕ್ಷಣದಿಂದಲೇ ರದ್ದು ಪಡಿಸಲಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ ಸಚಿವರ ಎಚ್ಚರಿಕೆಗೆ ಕ್ಯಾರೇ ಎನ್ನದ ಖಾಸಗಿ ಬಸ್‌ಗಳ ಮಾಲೀಕರು ದುಪ್ಪಟ್ಟು, ಮೂರು ಪಟ್ಟು ಟಿಕೆಟ್ ದರ ಏರಿಸಿದ್ದಾರೆ. ಹೀಗಾಗಿ ಸಚಿವರ ಎಚ್ಚರಿಕೆ ಕೇವಲ ಟ್ವಿಟರ್ ಸಂದೇಶಗಳಿಗೆ ಸೀಮಿತವಾಯಿತಾ? ಅಥವಾ ಖಾಸಗಿ ಬಸ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರಕ್ಕೂ ಸಾಧ್ಯವಿಲ್ಲವಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಈಗಾಗಲೇ ಈ ಕುರಿತು ಸಾರ್ವಜನಿಕರು ಸಾಕಷ್ಟು ದೂರುಗಳನ್ನು ಸಲ್ಲಿಸಿದ್ದಾರೆ. ಆದ್ದರಿಂದ ಸರಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಖಾಸಗಿ ಬಸ್‌ಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ಹೆಚ್ಚು ದರ ಪಡೆಯುವ ಬಸ್‌ಗಳನ್ನು ತಪಾಸಣೆಮಾಡಿ, ಸೂಕ್ತ ದಂಡ ವಿಧಿಸಬೇಕು. ಇಲ್ಲವಾದಲ್ಲಿ ಪ್ರತಿ ಬಾರಿಯೂ ಇದು ಮರುಕಳಿಸುತ್ತಲೇ ಇರುತ್ತದೆ.
ಕೇವಲ ೮-೧೦ ಸಾವಿರ ರುಪಾಯಿ ತಿಂಗಳ ಸಂಬಳಕ್ಕೆ ಬೆಂಗಳೂರಿಗೆ ಬಂದು ನೆಲೆಸಿರುವ ಜನರೂ ಎಲ್ಲರಂತೆ ಹಬ್ಬಆಚರಿಸುವಂತಾಗಬೇಕು. ನಾಡಹಬ್ಬ ನಾಡಿನ ಎಲ್ಲ ಜನರಿಗೂ ಹಬ್ಬವಾಗಬೇಕು. ಕೇವಲ ಶ್ರೀಮಂತರಿಗಷ್ಟೇ ಸೀಮಿತವಾಗ ಬಾರದು. ಖಾಸಗಿ ಬಸ್‌ಗಳ ಟಿಕೆಟ್ ದರ ಮಾಫಿಯಾಗೆ ಇದೇ ವರ್ಷ ಅಂತ್ಯ ಹಾಡಬೇಕು.