ಬಾಲ್ಯವಿವಾಹ ತಡೆಗೆ ಕ್ರಮ ಕೈಗೊಳ್ಳಿ
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ೧,೨೩೪ ಬಾಲ್ಯ ವಿವಾಹಗಳು ನಡೆದಿದ್ದು, ಬಾಲ್ಯ ವಿವಾಹ ನೆರವೇರಿಸಲು ಮುಂದಾದ ವರ ವಿರುದ್ಧ ಈ ಅವಧಿಯಲ್ಲಿ ೧,೩೦೩ ಜನರ ವಿರುದ್ಧ ದೂರು ದಾಖಲಾಗಿವೆ.
ಆದರೆ ೮ ಜನರಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ. ಈ ಹಿಂದೆ ಉತ್ತರ ಕರ್ನಾಟಕದ ಹಿಂದುಳಿದ ಜಿಗಳಲ್ಲಿ ಮಾತ್ರ ಬಾಲ್ಯ ವಿವಾಹ ನಡೆಯುತ್ತಿತ್ತು. ಆದರೆ ಕಳೆದ ಐದು ವರ್ಷಗಳಿಂದ ದಕ್ಷಿಣ ಕರ್ಣಾಟಕದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿವೆ. ಈ ಸಾಲಿನಲ್ಲಿ ಮಂಡ್ಯ ಮೊದಲ ಸ್ಥಾನದಲ್ಲಿದ್ದರೆ, ನಂತರ ಹಾಸನ, ಬೆಂಗಳೂರು ಗ್ರಾಮಾಂತರಜಿಲ್ಲೆಗಳುನಂತರದ ಸ್ಥಾನದಲ್ಲಿವೆ.
ಪೋಷಕರೇ ಮಕ್ಕಳನ್ನು ವಿವಾಹ ಬಂಧನಕ್ಕೆ ದೂಡುತ್ತಿದ್ದಾರೆ. ಇನ್ನೂ ಕೆಲವೆಡೆ ಶಾಲೆಗಳು ದೂರವಿದ್ದು, ಕಳುಹಿಸುವುದು ಸುರಕ್ಷತೆ ದೃಷ್ಟಿಯಿಂದ ಕಷ್ಟಕರ ಎಂದು ಬಾಲ್ಯ ವಿವಾಹ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಬಾಲ್ಯ ವಿವಾಹ ಹೆಚ್ಚಾಗಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಕಾರಣ ಎನ್ನಲಾಗಿದೆ.
ಆದ್ದರಿಂದ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಬಾಲ್ಯ ವಿವಾಹದ ದುಷ್ಪರಿಣಾಮದ ಕುರಿತು ಪೋಷಕರಲ್ಲಿಜಾಗೃತಿ ಮೂಡಿಸಲು ಸಮನ್ವಯದಿಂದ ಕೆಲಸ ಮಾಡಬೇಕಿದೆ. ೧೮ ವರ್ಷದೊಳಗಿನ ಹೆಣ್ಣು ಮಕ್ಕಳಲ್ಲಿ ಗರ್ಭ ಕೋಶ ಬೆಳವಣಿಗೆ ಆಗಿರುವುದಿಲ್ಲ. ಮೂಳೆಗಳು ಕೂಡ ಬೆಳೆದಿರುವುದಿಲ್ಲ. ಸಾಕಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ. ಇಂತಹವರು ಗರ್ಭ ಧರಿಸಿದರೆ ಗರ್ಭಪಾತದ ಸಮಸ್ಯೆಗಳು ಹೆಚ್ಚಾಗುತ್ತವೆ.
ತಾಯಿ-ಮಗುವಿಗೆ ಮಾರಕವಾಗಲಿದೆ. ಮುಟ್ಟಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮಗು ಹುಟ್ಟುವಾಗಲೇ ಸಾಯುವುದು, ಒಂದು ವೇಳೆ ಮಗು ಜನಿಸಿದರೂ ವಿಕಲಾಂಗ ಮಕ್ಕಳು ಜನಿಸುತ್ತವೆ. ಎಳೆ ವಯಸ್ಸಿನಲ್ಲಿ ಬಾಲಕಿಯೊಬ್ಬಳು ತಾಯಿಯಾದರೆ ಅವಳಿಗೆ ಮಗುವಿನ ಆರೈಕೆ ಗೊತ್ತಿರುವುದಿಲ್ಲ. ಕೌಟುಂಬಿಕ ವಾತಾವರಣಕ್ಕೂ ಹೊಂದಿಕೊಳ್ಳಲಾಗದೆ ಮಾನಸಿಕವಾಗಿ ಕುಗ್ಗಿಹೋಗುತ್ತಾಳೆ. ಖಿನ್ನತೆ, ಆತಂಕಕ್ಕೆ ಒಳಗಾಗುತ್ತಾಳೆ.
ಇದರಿಂದಾಗಿ ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ಸಮಸ್ಯೆಗಳಿಗೆ ಸಿಲುಕುತ್ತಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಮದುವೆ ಮಾಡಿಬಿಟ್ಟರೆ ಜವಾಬ್ದಾರಿ ಮುಗಿಯಿತು ಎಂಬ ಧೋರಣೆ ಬಿಟ್ಟು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಅವರ ಭವಿಷ್ಯಕ್ಕೆ ದಾರಿಯಾಗಬೇಕು.