ಸಮಾವೇಶ, ಯಾತ್ರೆ ಅಬ್ಬರದಲ್ಲಿ ರಾಜ್ಯದ ಅಭಿವೃದ್ಧಿ ಮರೆಯದಿರಿ
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಐದಾರು ತಿಂಗಳಿರುವಾಗಲೇ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕ ಪಕ್ಷಗಳು, ಈಗಲೇ ಚುನಾವಣಾ ಮೂಡ್‌ಗೆ ವಾಲಿದ್ದು, ಸಮಾವೇಶ ರ‍್ಯಾಲಿಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ.
ಈ ರೀತಿ ಸಾಲು ಸಾಲು ರ‍್ಯಾಲಿ, ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿದ್ದಂತೆ ಆಡಳಿತ ಪಕ್ಷದ ಮುಖ್ಯಮಂತ್ರಿಗಳಾದಿಯಾಗಿ ಸಚಿವರು ಹಾಗೂ ಶಾಸಕರು ಆ ಸಮಾವೇಶಗಳನ್ನು ಆಯೋಜಿಸುವಲ್ಲಿಯೇ ಬಹು ಸಮಯ ಮೀಸಲಿಡುತ್ತಾರೆ. ಇನ್ನು ಪ್ರತಿಪಕ್ಷದ ಶಾಸಕರೂ ತಮ್ಮ ಕ್ಷೇತ್ರದಲ್ಲಿ ಪಕ್ಷ ಸಂಘಟಿಸುವುದರಲ್ಲಿಯೇ ಸಮಯವನ್ನು ಕಳೆಯುತ್ತಿದ್ದಾರೆ. ಚುನಾವಣಾ ದೃಷ್ಟಿಯಿಂದ ಈ ರೀತಿ ಮಾಡುವುದು ತಪ್ಪು ಎಂದು ಹೇಳಲು ಆಗುವು ದಿಲ್ಲ. ಆದರೆ ಈಗ ರಾಜ್ಯದ ಬಹುಭಾಗದಲ್ಲಿ ಮಳೆಯ ಅಬ್ಬರ ಜೋರಾ ಗಿದ್ದು, ಅನೇಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರೊಂದಿಗೆ ಹತ್ತು ಹಲವು ಯೋಜನೆಗಳು ಆರಂಭಿಕ ಹಂತದಲ್ಲಿ ಅಥವಾ ಮುಕ್ತಾಯ ಗೊಳ್ಳುವ ಹಂತದಲ್ಲಿವೆ. ಈ ಸಮಯ ದಲ್ಲಿ ಸಚಿವರು ಹಾಗೂ ಜನಪ್ರತಿನಿಧಿಗಳು ಈ ಯೋಜನೆಗಳ ಕಾರ್ಯಗತಿಯನ್ನು ಗಮನಿಸಬೇಕಾಗುತ್ತದೆ. ಮುಂದಿನ ಚುನಾ ವಣಾ ತಯಾರಿಯ ಹೆಸರಲ್ಲಿ ಈ ಯೋಜನೆಗಳ ಬಗ್ಗೆ ಗಮನಹರಿಸದೇ ಹೋದರೆ, ಈ ಯೋಜನೆ ಗಳು ನನೆಗುದಿಗೆ ಬೀಳುತ್ತವೆ.
ಇದನ್ನು ಗಮನದಲ್ಲಿರಿಸಿಕೊಂಡು, ಆಡಳಿತ ಹಾಗೂ ಪ್ರತಿಪಕ್ಷಗಳ ಜನಪ್ರತಿನಿಧಿಗಳು ಹಾಗೂ ನಾಯಕರು ತಮ್ಮ ಅಬ್ಬರ ಪ್ರಚಾರಗಳ ನಡುವೆಯೂ ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳುವ ಅಗತ್ಯವಿದೆ. ಅದರಲ್ಲಿಯೂ ಇತ್ತೀಚಿನ ದಿನದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಳ್ಳುವ ಸಮಾವೇಶ, ಸರಕಾರಿ ಕಾರ್ಯಕ್ರಮಗಳಲ್ಲಿ  ಭಾಗ ವಹಿಸುವ ಸಲುವಾಗಿ ಬಹುತೇಕ ಸಚಿವರು ವಾರ ಕಳೆದರೂ ವಿಧಾನಸೌಧದತ್ತ ಬರುತ್ತಿಲ್ಲ.
ತಿಂಗಳಾದರೂ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುತ್ತಿಲ್ಲ. ಇಂತಹ ನಡೆಯಿಂದ ರಾಜ್ಯದ ಜನರಿಗೆ ಅನ್ಯಾಯವಾಗುವ ಸಾಧ್ಯತೆಯಿದೆ. ಆದ್ದರಿಂದ ಪಕ್ಷದ ಕಾರ್ಯಕ್ರಮ, ಚುನಾವಣಾ ಸಿದ್ಧತೆಯ ನಡುವೆಯೂ ಜನಪ್ರತಿನಿಧಿಗಳು ಹಾಗೂ ಸರಕಾರ ನಡೆಸುತ್ತಿರುವವರು ರಾಜ್ಯದ ಅಭಿವೃದ್ಧಿಗೆ ಆಗಬೇಕಿರುವ ಕೆಲಸಗಳಿಗೆ ಒತ್ತು ನೀಡಬೇಕು.