ಮುಂದಿನ ಸವಾಲುಗಳನ್ನು ಖರ್ಗೆ ಜಯಿಸಲಿ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಕನ್ನಡಿಗ ರೊಬ್ಬರಿಗೆ ದೇಶದ ಹಳೆಯ ಪಕ್ಷದ ಚುಕ್ಕಾಣಿ ಸಿಕ್ಕಿರುವುದು ನಾಡಿಗೇ ಹೆಮ್ಮೆಯ ವಿಚಾರ.
ಸುಧೀರ್ಘ ಕಾಲದ ನಂತರ ಗಾಂಧಿ ಕುಟುಂಬದ ಹೊರಗಿನವರೊಬ್ಬರು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರುವುದರಿಂದ, ಸಹಜ ವಾಗಿಯೇ ಖರ್ಗೆ ಮೇಲೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನ ತೊರೆದಾಗ ಇದ್ದುದಕ್ಕಿಂತ ಹೆಚ್ಚು ಸಂಕಷ್ಟದಲ್ಲಿ ಪಕ್ಷ ಈಗ ಇದೆ. ರಾಹುಲ್ ಅವರು ಅಧ್ಯಕ್ಷ ಸ್ಥಾನದಿಂದ ಇಳಿದ ನಂತರ ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿತ್ತು.
ಕಾಂಗ್ರೆಸ್ ನೇತೃತ್ವದ ಸರಕಾರಗಳು ಉರುಳಿದ್ದವು. ಪಕ್ಷದ ನಾಯಕರು ಹಾಗೂ ಕಾರ್ಯ ಕರ್ತರ ಪೈಕಿ ಹಲವರು ಪಕ್ಷವನ್ನು ತೊರೆದು ಇತರ ಪಕ್ಷಗಳನ್ನು, ಅದರಲ್ಲೂ ಮುಖ್ಯ ವಾಗಿ ಬಿಜೆಪಿಯನ್ನು ಸೇರಿದ್ದರು. ಪಕ್ಷಕ್ಕೆ ಒಬ್ಬ ಗಟ್ಟಿ ನಾಯಕ ಇಲ್ಲದಿದ್ದರೆ, ಸಂಘಟನೆ ಯಲ್ಲಿ ಒಗ್ಗಟ್ಟು ಕಾಣದಿದ್ದರೆ, ಹೊಸ ಚೈತನ್ಯ ಮತ್ತು ಹೊಸ ದಿಕ್ಕು ಇಲ್ಲದಿದ್ದರೆ ಒಂದು ಪಕ್ಷದ ಗತಿ ಏನು ಆಗಬೇಕೋ ಅದೆಲ್ಲವೂ ಕಾಂಗ್ರೆಸ್‌ನಲ್ಲಿ ಕಳೆದ ಎಂಟು ವರ್ಷಗಳಲ್ಲಿ ಆಗಿದೆ.
ಹೀಗಾಗಿ ಇದೀಗ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಸಾಕಷ್ಟು ಸವಾಲುಗಳು ಇವೆ. ಮುಖ್ಯವಾಗಿ ಮುಂದಿನ ಐದಾರು ತಿಂಗಳಲ್ಲೇ ಕರ್ನಾಟಕದ ವಿಧಾನಸಭೆ ಚುನಾವಣೆ ನಡೆಯಲಿದ್ದು, ತವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದ ಬಹುದೊಡ್ಡ ಸವಾಲು ಇದೆ. ಹೀಗಾಗಿ ಖರ್ಗೆ ಅವರ ಸುದೀರ್ಘ ರಾಜಕೀಯ ಅನುಭವ, ಅಧ್ಯಯನ, ಜ್ಞಾನ, ಬದ್ಧತೆಗಳು ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ಹಾಗೂ ರಾಜಕೀಯವಾಗಿ ಇನ್ನಷ್ಟು ಗಟ್ಟಿಯಾಗಿ ಕಟ್ಟುವಲ್ಲಿ  ಸಹಕಾರಿ ಯಾಗಲಿ.
ಖರ್ಗೆ ಅವರು ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಅಧ್ಯಕ್ಷ ಆಗುತ್ತಾರೆ ಎಂದು ಪ್ರತಿಪಕ್ಷಗಳು ಈಗಾಗಲೇ ಟೀಕಿಸಿವೆ. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಖರ್ಗೆ ತೆಗೆದುಕೊಳ್ಳುವ ತೀರ್ಮಾನಗಳಲ್ಲಿ ಗಾಂಧಿ ಕುಟುಂಬದ ಪ್ರಭಾವ ಇರದಂತೆ ನೋಡಿಕೊಳ್ಳಬೇಕಿದೆ.