ಕನ್ನಡ ನುಡಿ ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಹೊಸ್ತಿಲಲ್ಲಿ ಎಲ್ಲೆಡೆ ಕನ್ನಡ ಭಾಷೆಯ ಉಳಿವಿನ ಬಗ್ಗೆ ಚರ್ಚೆಗಳು ಆಗುತ್ತವೆ, ದಿನಕಳೆದಂತೆ ಚರ್ಚೆಗಳು ಗೌನ ವಾಗುತ್ತವೆ. ಯಾವುದೇ ಒಂದು ನುಡಿಯು ಸಾಕಷ್ಟು ಮಂದಿಯ ನಡುವೆ ಬಳಕೆಯಲ್ಲಿರದೇ, ಕೆಲವೇ ಮಂದಿಯ ಬಾಯಿ ಮಾತಾಗಿದ್ದರೆ ಅದನ್ನು ಅಳಿವಿನ ಅಂಚಿನಲ್ಲಿರುವ ನುಡಿ ಎನ್ನಲಾಗುತ್ತದೆ.
ಒಂದು ನುಡಿಯು ಬೇರೊಂದು ನುಡಿಯ ಹೊಡೆತಕ್ಕೆ ಸಿಕ್ಕಿ ಅಳಿವಿನ ಅಂಚಿಗೆ ಬರಬಹುದು. ಈಗ ಕನ್ನಡವೂ ಅದೇ ಸ್ಥಿತಿಯಲ್ಲಿದೆ. ಒಂದು ನುಡಿಯು ಅಳಿವಿನ ಅಂಚಿಗೆ ಬರಲು ಎರಡು ಮುಖ್ಯ ಕಾರಣಗಳನ್ನು ಗುರುತಿಸ ಬಹುದು.
೧. ಒಂದು ನುಡಿಯಿಂದ ಮಂದಿಯ ಬದುಕು ಕಟ್ಟಿಕೊಳ್ಳಲಾಗದೇ ಹೋಗು ವುದು. ಅದಕ್ಕಾಗಿ ಆ ಮಂದಿಯು ಬೇರೊಂದು ನುಡಿಯ ಮೊರೆಹೋಗುವುದು. ೨. ಆಳ್ವಿಕೆಯಲ್ಲಿ ಎಲ್ಲ ನುಡಿಗಳನ್ನು ಸಮಾನವಾಗಿ ಕಾಣದೆ ಯಾವುದೋ ಒಂದು ನುಡಿಯನ್ನು ಮೇಲೇರಿಸಿ ಕೂರಿಸುವುದು ಮತ್ತು ಆ ನುಡಿಯನ್ನು ಬಳಸುವಂತೆ ಬಗೆ ಬಗೆಯ ರೂಪದಲ್ಲಿ ನಾಡಿನ ಮಂದಿಯ ಮೇಲೆ ಸರಕಾರವೇ ಹೇರಿಕೆ ಮಾಡುವುದು. ಈ ಎರಡೂ ಕಾರಣಗಳು ಪ್ರಸ್ತುತ ಘಟಿಸುತ್ತಿವೆ.
ಆ ಹಿನ್ನೆಲೆಯಲ್ಲಿ ಈ ಮೇಲಿನ ಎರಡೂ ಕಾರಣಗಳ ಸುತ್ತ ನಾವು ಗಮನಹರಿಸಿ ನಮ್ಮ ನುಡಿಯನ್ನು ಕಾಪಾಡಿಕೊಳ್ಳಬೇಕಿದೆ. ನಮ್ಮ ನುಡಿಯನ್ನು ನಾವು ಹಲವಾರು ತಲೆಮಾರುಗಳವರೆಗೂ ಉಳಿಸಿಕೊಳ್ಳಬೇಕು ಎಂದರೆ ನಾವಾಡುವ ಕನ್ನಡ ಭಾಷೆ ಯನ್ನು ಬಳಸುವವರ ಸಂಖ್ಯೆ ಕಡಿಮೆ ಯಾಗದಂತ ಎಚ್ಚರವಹಿಸಬೇಕಿದೆ. ನುಡಿಯ ಬಳಕೆಗೆ ಹೆಚ್ಚು ಒತ್ತು ಕೊಡಬೇಕಿದೆ. ಬಳಕೆ ಎಂದರೆ ನಮ್ಮ ಕಲಿಕೆ, ದುಡಿಮೆ ಮತ್ತು ವ್ಯವಹಾರಗಳಲ್ಲಿ ನುಡಿಯನ್ನು ಕಾದುಕೊಳ್ಳುವುದು.
ಇದೆಲ್ಲದರ ಜತೆಗೆ ಮುಖ್ಯವಾಗಿ ನಮ್ಮ ಆಳ್ವಿಕೆಯಲ್ಲಿ ನಮ್ಮ ನುಡಿಗೆ ಸಮಾನ ಸ್ಥಾನಮಾನ ಇರುವಂತೆ ನೋಡಿಕೊಳ್ಳುವುದು ಮತ್ತು ಬೇರೊಂದು ನುಡಿಯ ಹೇರಿಕೆ ಆಗದಂತೆ ತಡೆಗಟ್ಟುವುದು. ಹೀಗಾದಲ್ಲಿ ಮಾತ್ರ ಒಂದು ನುಡಿಯು ಮುಂದಿನ ತಲೆಮಾರಿಗೆ ಪಳೆಯುಳಿಕೆಯಾಗದಂತೆ ಬಳಕೆಯಲ್ಲಿಯೇ ಉಳಿಯುವುದು. ಇಲ್ಲವಾದಲ್ಲಿ ಜಗತ್ತಿನಲ್ಲಿ ಅನೇಕ ಭಾಷೆಗಳು ಅಳಿದುಹೋದ ಉದಾಹರಣೆಗಳು ನಮ್ಮ ಮುಂದಿವೆ. ಆ ನಿಟ್ಟಿನಲ್ಲಿ ಕನ್ನಡ ನಾಡು-ನುಡಿಯನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.