ಹಸಿವಿನ ಸೂಚ್ಯಂಕ ಕುಸಿತದಲ್ಲಿ ಪ್ರತಿಯೊಬ್ಬರದ್ದೂ ಪಾತ್ರವಿದೆ
ಒಂದೆಡೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ೧೦೭ನೇ (೧೨೧ ದೇಶಗಳ ಪೈಕಿ) ಸ್ಥಾನದಲ್ಲಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಕುಸಿದಿದೆ.
ಇನ್ನೊಂದೆಡೆ ಭಾರತದ ಜಿಡಿಪಿಯು ಈಗ ವಿಶ್ವದಲ್ಲಿ ೫ನೇ ಸ್ಥಾನದಲ್ಲಿದೆ. ಆದರೂ ಭಾರತದಲ್ಲಿ ಜನರು ಹಸಿವಿನಿಂದ ಬಳಲುತ್ತಿರುವುದಕ್ಕೆ ಕಾರಣ ವೇನು ಎಂಬ ಪ್ರಶ್ನೆ ಸಹವಾಗಿಯೇ ಹುಟ್ಟಿಕೊಳ್ಳುತ್ತದೆ. ಭಾರತವು ಜನಸಂಖ್ಯೆ ಹಾಗೂ ಸಂಪತ್ತು ಎರಡರಲ್ಲಿಯೂ ಶ್ರೀಮಂತವಾಗಿದೆ. ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಇಲ್ಲ. ಆದರೆ ಅದೆಲ್ಲವೂ ಸರಕಾರದ ಅಽನದಲ್ಲಿರುವ ಗೋದಾಮುಗಳಲ್ಲಿ ಸಂಗ್ರಹಗೊಂಡಿವೆ. ಹಸಿದವರಿಗೆ ಸೂಕ್ತ ಪ್ರಮಾಣ ದಲ್ಲಿ ವಿತರಣೆಯಾಗುತ್ತಿಲ್ಲ. ಅಲ್ಲದೆ, ದೇಶದ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತು ಶೇ.೧ರಷ್ಟು ಜನರ ಬಳಿ ಮಾತ್ರ ಕ್ರೋಡಿಕರಣ ಗೊಂಡಿದೆ.
ಸಂಪತ್ತಿನ ಅಸಮಾನ ಹಂಚಿಕೆಯಿಂದ ಉಳ್ಳವರು ಹಾಗೂ ಬಡವರ ನಡುವಿನ ಅಂತರ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶಕ್ಕೆ ಸಾವಿರಾರು ಕೋಟಿ ರುಪಾಯಿ ಬಂಡವಾಳ ಹೂಡಿಕೆಯಾಗುತ್ತಿದ್ದರೂ ನಿರುದ್ಯೋಗ ಪ್ರಮಾಣ ಕಡಿಮೆ ಆಗುತ್ತಿಲ್ಲ. ಪರಿಣಾಮ ವಾಗಿ ವಿಶ್ವದ ಒಟ್ಟು ಬಡವರ ಪೈಕಿ ಶೇ.೨೫ರಷ್ಟು ಜನ ಭಾರತದಲ್ಲಿಯೇಇzರೆ. ಬಡವರ ಪಾಲಿನ ಅವಕಾಶಗಳೆಗಳೆಲ್ಲವೂ ಶ್ರೀಮಂತರ ಪಾಲಾಗುತ್ತಿದ್ದು, ಇದರಿಂದ ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ.
ಆರ್ಥಿಕವಾಗಿ ಅತಿ ಕೆಳಮಟ್ಟದಲ್ಲಿರುವ ಜನರ ಜೀವನ ಸುಧಾರಣೆಯಿಂದ ಬರುವ ಆರ್ಥಿಕ ಪ್ರಯೋಜನದಿಂದಲೇ ದೇಶವು ಸಮೃದ್ಧಿಯಾಗುವುದು. ಆದ್ದರಿಂದ ಆರ್ಥಿಕ ಅಭಿವೃದ್ಧಿಯ ಪ್ರಯೋಜನ ಎಲ್ಲರಿಗೂ ಸಮಾನವಾಗಿ ಸಿಗುವಂತೆ ನೋಡಿಕೊಳ್ಳ ಬೇಕಿದೆ. ಮತ್ತೊಂದು ಸಂಗತಿಯೆಂದರೆ, ಪ್ರಪಂಚದಲ್ಲಿ ಉತ್ಪಾದನೆಯಾಗುವ ಆಹಾರದ ಮೂರನೇ ಒಂದು ಪಾಲು ವ್ಯರ್ಥವಾಗುತ್ತಿದೆ. ಭಾರತದಲ್ಲೂ ಈ ಪ್ರಮಾಣ ಕಡಿಮೆಯೇನಿಲ್ಲ. ಸ್ಟಾರ್ ಹೋಟೆಲ್‌ಗಳಲ್ಲಿ, ಮದುವೆ ಮತ್ತಿತರ ಕಾರ್ಯ ಕ್ರಮಗಳಲ್ಲಿ ತಿಂದಿದ್ದಕ್ಕಿಂತ ಹೆಚ್ಚು ಕಸದ ತೊಟ್ಟಿಯೇ ಸೇರಿರುತ್ತದೆ.
ತಟ್ಟೆಯಲ್ಲಿ ಹಾಕಿಸಿಕೊಂಡ ಅನ್ನವನ್ನು ಸಂಪೂರ್ಣವಾಗಿ ತಿನ್ನಬೇಕು ಎಂದು ಪ್ರತಿಯೊಬ್ಬರೂ ಭಾವಿಸುವುದು ಮತ್ತು ಜಾರಿಗೆತರುವುದು ಕೂಡ ಸಾಮಾಜಿಕ ಜವಾಬ್ದಾರಿ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ತಟ್ಟೆಯಲ್ಲಿ ಬಿಟ್ಟ ಅನ್ನದ ಅಗುಳು ಮತ್ತೊಬ್ಬರ ಹೊಟ್ಟೆ ತುಂಬಿಸುತ್ತಿತ್ತಲ್ಲ ಎಂಬ ಸಣ್ಣ ಪ್ರಶ್ನೆಯನ್ನಾದರೂ ಹಾಕಿಕೊಳ್ಳಬೇಕು. ಇಲ್ಲವಾದರೆ ಭಾರತವು ಹಸಿವಿನ ಸೂಚ್ಯಂಕದಲ್ಲಿ ಕುಸಿದಿರುವುದಕ್ಕೆ ಸರಕಾರವನ್ನು ದೂಷಿಸುವುದಕ್ಕೆ ಅನರ್ಹರಾಗುತ್ತೇವೆ.