ಗಡಿ ಕನ್ನಡ ಶಾಲೆಗಳ ಉಳಿಸಿ
ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮತ್ತೆ ಕಳೆಗಟ್ಟಿದೆ. ರಾಜ್ಯವನ್ನು ಆಳುವ ಸರಕಾರಗಳು, ಕನ್ನಡವನ್ನು ಉಳಿಸುವುದೇ ನಮ್ಮ ಮೊದಲ ಆದ್ಯತೆ ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಕನ್ನಡವನ್ನು ಗಡಿನಾಡ ಭಾಗದಲ್ಲಿ ಉಳಿಸಿ ಬೆಳೆಸಬೇಕಾಗಿರುವುದು ಕರ್ನಾಟಕ ಸರಕಾರದ ಆದ್ಯತೆಯಾಗಬೇಕು.
ಕರ್ನಾಟಕ ರಾಜ್ಯವೂ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಗಡಿಗಳನ್ನು ಹಂಚಿಕೊಂಡಿದೆ. ಈ ಗಡಿಗಳಲ್ಲಿ ಕನ್ನಡದ ಜತೆಗೆ ಮರಾಠಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಯ ಪ್ರಭಾವ ಸಹಜವಾಗಿಯೇ ಹೆಚ್ಚಾಗಿದೆ. ಆದರೆ ಇದು ಆಡಳಿತ ಭಾಷೆಯಾಗಿ ಅಥವಾ ಓದುವ ಭಾಷೆಯಾಗಿ ಮಾಡುವುದು ಒಪ್ಪುವ ವಿಷಯ ವಲ್ಲ.
ಆದರೆ ಇತ್ತೀಚಿನ ವರ್ಷಗಳಲ್ಲಿ ಗಡಿಭಾಗದಲ್ಲಿ ನೆರೆರಾಜ್ಯಗಳು ಸದ್ದಿಲ್ಲದೇ ಈ ಕೆಲಸವನ್ನು ಮಾಡಿಕೊಂಡು ಬರುತ್ತಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ನೆರೆರಾಜ್ಯಗಳ ಇಂತಹ ಪ್ರಯತ್ನವನ್ನು ಮೆಟ್ಟಿನಿಲ್ಲುವ ಪ್ರಯತ್ನವನ್ನು ಸ್ಥಳೀಯ ವಾಗಿ ಕೆಲವರು ಮಾಡುತ್ತಿದ್ದಾರೆಯಾದರೂ, ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳ್ಳು ತ್ತಿಲ್ಲ.
ಗಡಿಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಗಡಿ ಅಭಿವೃದ್ಧಿ ಪ್ರಾಧಿಕಾರವನ್ನು ಆರಂಭಿಸಿದೆ. ಆದರೆ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವ ಈಗಲೂ ಪ್ರಶ್ನಾರ್ಹ ವಿಷಯವೇ ಆಗಿದೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ಬೆಳೆಸಬೇಕಾದರೆ ಮೊದಲು ಮಕ್ಕಳಿಗೆ ಕನ್ನಡದ ಬಗ್ಗೆ ಪ್ರೀತಿ ಹುಟ್ಟಿಸಬೇಕು. ಅದಕ್ಕೆ ಕನ್ನಡಶಾಲೆಗಳಿರಬೇಕು. ಆದ್ದರಿಂದ ರಾಜ್ಯ ಸರಕಾರಕ್ಕೆ ಕನ್ನಡವನ್ನು ಉಳಿಸಿ ಬೆಳೆಸುವುದಕ್ಕೆ ಮೊದಲ ಹೆಜ್ಜೆಯಾಗಿ ಕರ್ನಾಟಕದ ಗಡಿ ಭಾಗದಲ್ಲಿ ಕನ್ನಡ ಶಾಲೆಗಳನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಮುಂದಾಗಬೇಕು.
ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲ ಎನ್ನುವ ನೆಪವಿಟ್ಟು ಶಾಲೆಗಳನ್ನು ಮುಚ್ಚುವ ಬದಲು, ವಿದ್ಯಾರ್ಥಿ ಗಳ ಸಂಖ್ಯೆ ಕಡಿಮೆಯಿರುವ ಶಾಲೆಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರುವಂತೆ ನೋಡಿಕೊಳ್ಳಬೇಕು ಹಾಗೂ ಇರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪಾಠ ಬೋಽಸುವ ವ್ಯವಸ್ಥೆಯನ್ನು ಸರಕಾರ ಮಾಡಬೇಕಿರುವುದು ಇಂದಿನ ಆದ್ಯತೆಯಾಗಬೇಕು.