ಟಿಕೆಟ್ಟಿಗೇ 2 ಲಕ್ಷವಾದರೆ….
‘ಇದು ಹುಚ್ಚೋ ಬೆಪ್ಪೋ ಶಿವಲೀಲೆಯೋ ಗೊತ್ತಾಗುತ್ತಿಲ್ಲ’ ಎಂಬಮಾತನ್ನು ಜನ ಆಗೀಗ ಬಳಸುವುದುಂಟು. ಯಾರಾದರೂ ಊಹೆಗೆ ನಿಲುಕದಂತೆ ವಿಕ್ಷಿಪ್ತವಾಗಿ ವರ್ತಿಸಿದಾಗ ಅಪ್ರಯತ್ನವಾಗಿ ಹೊಮ್ಮುವ ಉದ್ಗಾರವಿದು.
ರಾಜ್ಯ ಕಾಂಗ್ರೆಸ್ ಘಟಕದ ಹೊಸ ನಿಯಮವೊಂದನ್ನು ಕಂಡು ಬಹುತೇಕರು ಹೀಗೆ ಉದ್ಗರಿಸಿದರೆ ಅಚ್ಚರಿಯಿಲ್ಲ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿನ ಸ್ಪರ್ಧೆಗೆ ಪಕ್ಷದ ‘ಟಿಕೆಟ್’ ಬಯಸುವವರು ಮೊದಲು ಅರ್ಜಿ ಸಲ್ಲಿಸಬೇಕಂತೆ, ಅದರೊಂದಿಗೆ ೫ ಸಾವಿರ ರುಪಾಯಿ ಶುಲ್ಕ ಪಾವತಿಸಬೇಕಂತೆ, ಜತೆಗೆ ಸಾಮಾನ್ಯ ವರ್ಗಕ್ಕೆ ಸೇರಿದವರಾದರೆ ೨ ಲಕ್ಷ ರುಪಾಯಿ ಮೌಲ್ಯದ ಡಿಡಿ ಲಗತ್ತಿಸಬೇಕಂತೆ. ಈ ಹಣ ಪಕ್ಷದ ಕಟ್ಟಡ ಕಾಮಗಾರಿನಿಧಿಗೆಜಮೆ ಯಾಗುತ್ತದಂತೆ! ಅಮೆರಿಕದ ಅಬ್ರಹಾಂ ಲಿಂಕನ್ ಮಹಾಶಯ, ‘ಪ್ರಜೆ ಗಳಿಂದ ಪ್ರಜೆಗಳಿಗೋಸ್ಕರ ರಚಿತವಾದ ಪ್ರಜೆಗಳ ಸರಕಾರವೇ ಪ್ರಜಾಪ್ರಭುತ್ವ’ ಎಂದು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ವ್ಯಾಖ್ಯಾನಿಸಿ ದ್ದಾರೆ.
ಹುಚ್ಚನಲ್ಲದ, ದಿವಾಳಿಯಲ್ಲದ ಯಾವೊಬ್ಬ ‘ಸಾಮಾನ್ಯ’ ನೂ ದೇಶದ ‘ಪ್ರಭು’ವಾಗುವುದಕ್ಕೆ ಅನುವು ಮಾಡಿಕೊಡುವ ಈ ಪರಿಕಲ್ಪನೆ ಯಲ್ಲೇ ಪ್ರಜಾಪ್ರಭುತ್ವದ ಸೊಬಗಿದೆ. ಆದರೆ, ಟಿಕೆಟ್ಟಿಗೆ ಅರ್ಜಿ ಸಲ್ಲಿಸುವಾಗಲೇ ಭಾರಿಮೊತ್ತವನ್ನು ಪಾವತಿಸ ಬೇಕೆಂದರೆ, ಆದರ್ಶದ ನೆಲೆಗಟ್ಟಿನಲ್ಲಿ ರಾಜಕಾರಣ ಮಾಡಬಯಸುವವರು, ಕಷ್ಟಪಟ್ಟು ಹಣ ಸಂಪಾದಿಸುವ ಪ್ರಾಮಾಣಿಕರು ಏನು ಮಾಡಬೇಕು? ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬ ಇಂತಿಷ್ಟೇ ಹಣ ವ್ಯಯಿಸಬೇಕೆಂದು ಚುನಾವಣಾ ಆಯೋಗದ ಹುಕುಂ ಇದೆ.
ಆದರೆ ರಂಗೋಲಿ ಕೆಳಗೆ ತೂರಿಕೊಳ್ಳುವಷ್ಟು ಚಾಣಾಕ್ಷರಾದ ನಮ್ಮ ಪುಢಾರಿ-ಪ್ರಭೃತಿಗಳು ಆ ರಂಗೋಲಿಯನ್ನೇ ಆಯೋಗದ ಕಣ್ಣಿಗೆರಚಿ ಏಮಾರಿಸಿ ಹಣದಹೊಳೆ ಹರಿಸಿ ಇಷ್ಟಾರ್ಥ ಸಿದ್ಧಿಸಿಕೊಳ್ಳುವ, ತರುವಾಯದಲ್ಲಿ ಆ ‘ಹೂಡಿಕೆ’ಯನ್ನು ಚಕ್ರಬಡ್ಡಿ ಸಮೇತ ವಸೂಲಿ ಮಾಡಿಕೊಳ್ಳುವ ಪರಿಪಾಠವನ್ನು ದಶಕಗಳಿಂದಲೂ ಕಾಣುತ್ತಿದ್ದೇವೆ. ‘ರಾಶಿರೊಕ್ಕ’ ಇಲ್ಲದವರು ಚುನಾವಣಾ ಅಖಾಡಕ್ಕಿಳಿದರೆ ಅವರ ಬಾಯಿಗೆ ಬೀಳುವುದು ಅಖಾಡದ ಮಣ್ಣೇ ಎಂಬ ಅಪ್ರಿಯಸತ್ಯವಿಲ್ಲಿ ಗುಪ್ತಗಾಮಿನಿಯಾಗಿದ್ದರೂ ಆದರ್ಶವಾದಿ ಗಳು ಹರಸಾಹಸ ಮಾಡಿ ಕಣಕ್ಕಿಳಿಯುವುದಿದೆ.
ಆದರೆ ಅರ್ಜಿಯೊಂದಿಗೆ ಭಾರಿಮೊತ್ತ ನೀಡಬೇಕೆಂದರೆ ಇಂಥವರಿಗೆ ಅದು ಸಾಧ್ಯವೇ? ಈ ಹಣವನ್ನು ಪಕ್ಷದ ಕಟ್ಟಡನಿಧಿಗಾಗಿ ಬಳಸಲಾಗುತ್ತದೆ ಎಂದು ಸಂಬಂಧಪಟ್ಟವರು ತಿಪ್ಪೆ ಸಾರಿಸಿದರೂ, ಪ್ರಾಮಾಣಿಕರಿಗೆ ಅದು ಬಿಸಿತುಪ್ಪವೇ. ರಿಯಲ್ ಎಸ್ಟೇಟ್ಕುಳಗಳು, ದುಡ್ಡಿನ ಧಣಿಗಳಂಥ ಪ್ರಭಾವಿಗಳು ರಾಜಕಾರಣವನ್ನು ‘ಕಬ್ಜಾ’ ಮಾಡಿಕೊಂಡಿರುವ ಪರಿಣಾಮ, ಮತದಾರರಿಗೆ ಆಯ್ಕೆಯ ಅವಕಾಶವೇ ಇಲ್ಲದಂತಾಗಿ, ಇರುವವರಲ್ಲೇ ಒಬ್ಬನಿಗೆ ಠಸ್ಸೆ ಒತ್ತುವಂತಾಗಿದೆ.
ಇನ್ನು ಅರ್ಜಿಯೊಂದಿಗೆ ಭಾರಿಮೊತ್ತವೂ ಕಡ್ಡಾಯವಾಗಿಬಿಟ್ಟರೆ, ಪ್ರಾಮಾಣಿಕರು- ಆದರ್ಶವಾದಿಗಳು ರಾಜಕಾರಣದ ಕನಸನ್ನೂ ಕಾಣಲಾಗದು ಎಂಬುದು ಕಹಿಸತ್ಯ.