ಬಂಡವಾಳ ಹೂಡಿಕೆ ಸಮಾವೇಶಕ್ಕೆ ಭರ್ಜರಿ ಯಶಸ್ಸು: ಶ್ರಮಕ್ಕೆ ತಕ್ಕ ಪ್ರತಿಫಲ
ರಾಜ್ಯ ಸರಕಾರ ಆಯೋಜಿಸಿದ್ದ  ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡಿದ್ದ ಮೂರು ದಿನಗಳ ’ಇನ್ವೆಸ್ಟ್ ಕರ್ನಾಟಕ-೨೦೨೨’ ಬಂಡವಾಳ ಹೂಡಿಕೆದಾರರ ಸಮಾವೇಶ ಸಂಪನ್ನಗೊಂಡಿದೆ.
ಸಮಾವೇಶದಲ್ಲಿ  ೧೦ ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹರಿದು ಬಂದಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ೭ ಲಕ್ಷ ಕೋಟಿ ರು. ಬಂಡವಾಳ ಹರಿದು ಬರಬಹುದು ಎಂದು ಸಮಾವೇಶದ ಮೊದಲ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂದಾಜಿಸಿದ್ದರು. ಆದರೆ ಈಗ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿರುವುದು ಸಣ್ಣ ಬೆಳವಣಿಗೆಯೇನೂ ಅಲ್ಲ.
ಅದಾನಿ ಸಮೂಹ, ಜೆಎಸ್‌ಡಬ್ಲ್ಯು ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಬಂಡ ವಾಳ ಹೂಡಿಕೆ ಒಪ್ಪಂದ ಮಾಡಿಕೊಂಡಿವೆ. ಬಂಡವಾಳ ಹೂಡಿಕೆದಾರರಿಗೆ, ಉದ್ಯಮಿ ಗಳಿಗೆ ಕರ್ನಾಟಕ ಮೊದಲಿನಿಂದಲೂ ಅಚ್ಚುಮೆಚ್ಚಿನ ರಾಜ್ಯವಾಗಿದೆ. ಉದ್ಯಮ ಸ್ನೇಹಿ ವಾತಾವರಣ, ದೊಂಬಿ, ಕಾರ್ಮಿಕ ಮುಷ್ಕರ ರಹಿತ, ಶಾಂತಿಪ್ರಿಯ ರಾಜ್ಯ ಎಂಬ ಹೆಗ್ಗಳಿಕೆ- ಈ ಎಲ್ಲ ಅಂಶಗಳು ಇದಕ್ಕೆ ಕಾರಣವಾಗಿವೆ.
ಪ್ರಸ್ತುತ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಗೊಳಿಸಲು ಸಚಿವ ಮುರುಗೇಶ್ ನಿರಾಣಿ ಅವರು ಹಲವು ತಿಂಗಳುಗಳಿಂದ ಹಗಲಿರುಳೂ ಶ್ರಮ ಪಟ್ಟಿದ್ದಾರೆ. ದೇಶದ ವಿವಿಧ ನಗರಗಳು ಮಾತ್ರವಲ್ಲ, ವಿದೇಶಗಳಲ್ಲೂ ಸಾಕಷ್ಟು ರೋಡ್ ಶೋ, ಕರ್ನಾಟಕದ ಉದ್ಯಮ ಸ್ನೇಹಿ ವಾತಾವರಣದ ಪ್ರದರ್ಶನ ನಡೆಸಿದ್ದಾರೆ.
ಉದ್ಯಮ ದಿಗ್ಗಜಗಳ ಜತೆ ಸತತ ಸಂಪರ್ಕವಿಟ್ಟುಕೊಂಡು ಬಂಡವಾಳ ಹೂಡಿಕೆಗೆ ಕರ್ನಾಟಕ ಅತ್ಯಂತ ಪ್ರಶಸ್ತ ಸ್ಥಳ ಎಂಬು ದನ್ನು ಮನವರಿಕೆ ಮಾಡಿಸಿದ್ದಾರೆ. ರಾಜ್ಯ ಸರಕಾರ ಅವರ ಈ ಎಲ್ಲ ಪ್ರಯತ್ನಗಳಿಗೆ ಬೆಂಬಲವಾಗಿ ನಿಂತಿದೆ. ಈ ಸಂಘಟಿತ ಪ್ರಯತ್ನಗಳಿಂದ ಇನ್ವೆಸ್ಟ್ ಕರ್ನಾಟಕ-೨೦೨೨ ಯಶಸ್ವಿಯಾಗಿದೆ. ರಸ್ತೆ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಇನ್ನಷ್ಟು ಹೆಚ್ಚಿನ ಆದ್ಯತೆಯೊಂದಿಗೆ ಸುಧಾರಿಸಿದರೆ ಉದ್ಯಮಗಳ ಯಶಸ್ಸಿಗೆ ಬೇರಾವುದೇ ಕೊರತೆ ನಮ್ಮ ರಾಜ್ಯದಲ್ಲಿಲ್ಲ.
ಭಾರತದ ಅಭಿವೃದ್ಧಿಗೆ ಕರ್ನಾಟಕದ ಕೊಡುಗೆ ಅಪಾರ. ಅಭಿವೃದ್ಧಿಯ ಎಂಜಿನ್ ಆಗಿ ಪ್ರವರ್ತಿಸುವ ಎಲ್ಲ ಅವಕಾಶಗಳು ಕರ್ನಾಟಕದಲ್ಲಿವೆ. ಬೆಂಗಳೂರಿನಲ್ಲಿ ಈಗಾಗಲೇ ಉದ್ಯಮದ ಅಭಿವೃದ್ಧಿ ಸ್ಯಾಚುರೇಶನ್ ಹಂತ ತಲುಪಿದ್ದು, ರಾಜ್ಯದ ಇತರ ನಗರಗಳಿಗೆ ಇದು ಪಸರಿಸಬೇಕಾಗಿದೆ.