ಆರೋಗ್ಯ ಕೇಂದ್ರಗಳನ್ನು ಬಲಪಡಿಸಿ
ರಾಜ್ಯದಲ್ಲಿ ಎಲ್ಲರಿಗೂ ಸಕಾಲಕ್ಕೆ ಆರೋಗ್ಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತರಲಾಗಿದೆ. ದುಬಾರಿ ದರ ತೆತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾ ಗದೇ ಇರುವವರಿಗೆ ಉತ್ತಮ ಚಿಕಿತ್ಸೆ ನೀಡುವುದು ಇದರ ಉದ್ದೇಶ.
ದುಡ್ಡಿಲ್ಲದ ಕಾರಣಕ್ಕೆ ಜೀವ ಹೋಗಬಾರದು ಎಂಬ ಆಶಯದಿಂದ ಆಯುಷ್ಮಾನ್ ಕಾರ್ಡ್ ರೂಪಿಸಲಾಗಿದೆ. ಆದರೆ ಕಾರ್ಡ್ ಇಲ್ಲದ ಕಾರಣಕ್ಕೆ ತುಮಕೂರಿನಲ್ಲಿ ಮಹಿಳೆಯೊಬ್ಬಳು ಹೆತ್ತಕೂಸುಗಳೊಂದಿಗೆ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿರುವುದು ಇಡೀ ರಾಜ್ಯವೇ ತಲೆತಗ್ಗಿಸು ವಂತಹದ್ದು. ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸರಕಾರವೇ ಹೇಳುತ್ತಿದೆ. ಇನ್ನೊಂದು ಕಡೆ ದಾಖಲೆಗಳು ಇಲ್ಲದೆ ಯಾವುದೇ ಸೌಲಭ್ಯ ನೀಡುತ್ತಿಲ್ಲ.
ಮೊದಲು ಈ ಗೊಂದಲವನ್ನು ಸರಕಾರ ಬಗೆಹರಿಸಬೇಕು. ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿರುವ ಸರಕಾರಿ ಆಸ್ಪತ್ರೆಗಳ ಪರಿಸ್ಥಿತಿ ಬಟಾಬಯಲಾಗಿತ್ತು. ಆಗಲೂ ಕೆಲವರು ಹೀಗೆಯೇ ಹಾಸಿಗೆ, ಆಮ್ಲಜನಕ ಸಿಗದೆ ಸತ್ತೇ ಹೋದರು. ಕೋವಿಡ್‌ನಿಂದ ಸರಕಾರ ಪಾಠ ಕಲಿತು ಸರಕಾರಿ ಆಸ್ಪತ್ರೆಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಮತ್ತೆ ನಿರ್ಲಕ್ಷ್ಯ ವಹಿಸಿದ್ದ ರಿಂದಲೇ ಸಾವಿನ ಪ್ರಕರಣಗಳು ನಿಲ್ಲುತ್ತಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ ಸೂಕ್ತ ಆರೈಕೆ ಮತ್ತು ಸಾಂತ್ವನ ಸಿಗುವಂತೆ ಮಾಡಬೇಕಾದುದು ಸರಕಾರದ ಹೊಣೆಗಾರಿಕೆ.
ಉಚಿತವಾಗಿ ಆರೋಗ್ಯ ಸೇವೆ ಒದಗಿಸಬೇಕಾದವರು ಅನವಶ್ಯಕವಾಗಿ ದಾಖಲೆಗಳನ್ನು ಕೇಳಿ ರೋಗಿಗಳನ್ನು ಸಾಗಹಾಕುವ ಪ್ರವೃತ್ತಿ ನಿಲ್ಲಬೇಕು. ಯಾವುದೇ ರೋಗಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಾಗ ದಾಖಲೆಗಳು ಮುಖ್ಯವಲ್ಲ. ತಾಯಿಕಾರ್ಡ್, ಆಧಾರ್ ಕಾರ್ಡ್‌ಗಳನ್ನು ಚಿಕಿತ್ಸೆ ನೀಡಿದ ಬಳಿಕವೂ ಕೇಳಬಹುದು ಎಂಬುದನ್ನು ಆರೋಗ್ಯ ಸಿಬ್ಬಂದಿ ತಿಳಿಯಬೇಕು. ತುಮಕೂರಿನ ಪ್ರಕರಣ ಬೆಳಕಿಗೆ ಬಂದ ಮೇಲಾದರೂ ಸರಕಾರ ಎಚ್ಚೆತ್ತುಕೊಂಡು ರಾಜ್ಯದಲ್ಲಿರುವ ಸರಕಾರಿ ಆಸ್ಪತ್ರೆಗಳು ಮತ್ತು ಸಿಬ್ಬಂದಿಯ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು.
ತುಮಕೂರು ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆರೋಗ್ಯ ವ್ಯವಸ್ಥೆಯ ನ್ಯೂನತೆಗಳನ್ನು ಸರಿಪಡಿಸಿ, ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಗಳನ್ನೂ ಕೈಗೊಳ್ಳುವ ಇಚ್ಛಾಶಕ್ತಿಯನ್ನು ಸರಕಾರ ತೋರಬೇಕು.