ಎಲ್ಲ ಗುಣವನ್ನು ಮಸಿ ನುಂಗದಿರಲಿ
ರಾಜ್ಯದ ೫ನೇ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಬೆಂಗಳೂರು ಅರಮನೆ ಮೈದಾನದಲ್ಲಿ ಚಾಲನೆ ಸಿಕ್ಕಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ, ಸ್ಟಾರ್ಟಪ್ ಉದ್ಯಮಗಳು ಸೇರಿದಂತೆ ದೇಶ-ವಿದೇಶಗಳಪ್ರತಿಷ್ಠಿತ ಉದ್ಯಮಗಳ ಅತಿರಥ-ಮಹಾರಥರು ಈ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಕರುನಾಡಿನಲ್ಲಿ ಹೂಡಿಕೆ ಮಾಡುವ ಇಚ್ಛೆಯನ್ನು ಹೊಮ್ಮಿಸಿದ್ದಾರೆ.
‘ವರ್ಚುವಲ್’ ಮಾರ್ಗೋಪಾಯದ ಮೂಲಕ ಮೊದಲ ದಿನದ ಸಮಾವೇಶ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಕರ್ನಾಟಕದಲ್ಲಿ ಕಾಣಸಿಗುವ ಹೂಡಿಕೆ-ಸ್ನೇಹಿ ವಾತಾವರಣದ ಬಗ್ಗೆ ಆಹ್ವಾನಿತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯವು ಹೂಡಿಕೆಗೆ ಪ್ರಶಸ್ತವೂ, ಸುರಕ್ಷಿತವೂ ಆಗಿದೆ ಎಂಬ ಭರವಸೆಯೂ ಅವರಿಂದ ಹೊಮ್ಮಿದೆ. ಸಮಾವೇಶದ ಮೊದಲ ದಿನವೇ ಭರ್ಜರಿ ಬಂಡವಾಳ ಹರಿದುಬರುವ ಎಲ್ಲ ಸೂಚನೆ ಗಳೂ ಕಂಡಿದ್ದು, ಬರೋಬ್ಬರಿ ೪.೫ ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ವ್ಯಾಪಾರ-ವ್ಯವಹಾರದ ಒಡಂಬಡಿಕೆಗಳಿಗೆ ಸಹಿಬಿದ್ದಿದೆ ಎನ್ನುತ್ತವೆ ಸುದ್ದಿಮೂಲಗಳು.
ಈ ಎಲ್ಲ ಕಾರಣಗಳಿಂದಾಗಿ ಒಂದಿಡೀ ವಿಶ್ವವೇ ಕರ್ನಾಟಕದೆಡೆಗೆ ತಿರುಗಿ ನೋಡು ವಂತಾಗಿ, ರಾಜ್ಯದ ಕೀರ್ತಿ ಕಿರೀಟಕ್ಕೆ ಹೊಸದೊಂದು ಗರಿ ಸೇರಿಕೊಂಡಂತಾಗಿದೆ. ವ್ಯಾವಹಾರಿಕ ದೃಷ್ಟಿಕೋನ ಅಥವಾ ಮಾರುಕಟ್ಟೆ ತಂತ್ರಗಾರಿಕೆಯ ಆಯಾಮದಲ್ಲಿ ನೋಡಿದಾಗ ಇಂಥ ಭರವಸೆಗಳು, ಆಶಾವಾದಗಳು ಕಿವಿಗಿಂಪಾಗಿಯೂ, ಮನಕ್ಕೆ ಆಹ್ಲಾದಕರವಾಗಿಯೂ ತೋರುವುದು ಸಹಜ.
ಹಾಗಂತ, ವಾಸ್ತವವನ್ನು ನಿರ್ಲಕ್ಷಿಸಿದರೆ ಮತ್ತು ವ್ಯವಸ್ಥೆಯಲ್ಲಿನ ನ್ಯೂನತೆ/ ಕೊರತೆಗಳನ್ನು ನೀಗಿಕೊಳ್ಳದಿದ್ದರೆ ನಾವು ಆಗಾಗ ಹೇಳಿಕೊಂಡು ಬೆನ್ನುತಟ್ಟಿಕೊಳ್ಳುವ ‘ಉದ್ಯಮಸ್ನೇಹಿ ವಾತಾವರಣ’, ‘ಸುಲಲಿತ ವ್ಯವಹಾರ ಸಾಧ್ಯತೆ’ ಎಂಬ ಪರಿಕಲ್ಪನೆಗಳು ಮುಕ್ಕಾಗಬಹುದು. ಹೂಡಿಕೆದಾರರ ಕೃಪಾಕಟಾಕ್ಷದಿಂದಾಗಿ ರಾಜ್ಯಕ್ಕೆ ಕೋಟಿಗಟ್ಟಲೆ ಬಂಡವಾಳ ಹರಿದುಬರಬಹುದು.ಆದರೆ ಅವರು ನಮ್ಮಲ್ಲಿ ಕಟ್ಟಬಯಸುವ ಉದ್ಯಮಗಳಿಗೆ ಅಗತ್ಯವಾಗುವ ವಿದ್ಯುತ್, ಉತ್ತಮ ರಸ್ತೆ, ನೀರು ಮೊದಲಾದ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಾವೆಷ್ಟು ಸಶಕ್ತರಾಗಿದ್ದೇವೆ ಎಂಬ ಆತ್ಮಾವಲೋಕನವನ್ನೂ ನಮ್ಮ ಆಳುಗರು ಮಾಡಿ ಕೊಳ್ಳಬೇಕಿದೆ.
ಬೆಂಗಳೂರು ಮಹಾನಗರಿ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ರಸ್ತೆಗಳ ಅವಸ್ಥೆ ‘ದುರವಸ್ಥೆ’ಯ ಹಂತ ತಲುಪಿರುವುದನ್ನು ಬಿಡಿಸಿ ಹೇಳಬೇಕಿಲ್ಲ; ಹೆಜ್ಜೆಗೊಂದರಂತೆ ಸಿಗುವ ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕಿ ಸಂಚರಿಸಬೇಕಾದ ಪರಿಸ್ಥಿತಿ ಬಹಳಷ್ಟುಕಡೆಯಿದೆ. ಇನ್ನು ನೀರು ಮತ್ತು ವಿದ್ಯುಚ್ಛಕ್ತಿಯ ಲಭ್ಯತೆಯಲ್ಲಾಗುವ ಎಡವಟ್ಟಿನ ಕುರಿತು ಬಿಡಿಸಿ ಹೇಳಬೇಕಿಲ್ಲ. ಇಂಥ ಆದ್ಯತಾ ವಿಷಯಗಳ ಕುರಿತು ಯಥೋಚಿತ ಗಮನ ಹರಿಸದಿದ್ದಲ್ಲಿ, ಅದು ಹೂಡಿಕೆದಾರರಿಗೂ ಅವರನ್ನು ನೆಚ್ಚಿಕೊಂಡ ಇಲ್ಲಿನವರಿಗೂ ಭ್ರಮನಿರಸನ ಉಂಟುಮಾಡುವುದರಲ್ಲಿ ಸಂದೇಹವಿಲ್ಲ. ಹಾಗಾಗದಿರಲಿ…