ಹೆಗ್ಗೋಠಾರ ಘಟನೆ ಖಂಡನೀಯ
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕ್ನಲ್ಲಿಯಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಅದರಲ್ಲಿದ್ದ ನೀರೆಲ್ಲವನ್ನೂ ಹೊರಕ್ಕೆ ಹರಿಸಿ, ಗೋಮೂತ್ರದಿಂದ ಶುದ್ಧೀಕರಿಸ ಲಾಗಿರುವ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹದ್ದು.
ಪ್ರಕೃತಿ ತೋರದ ಅಸಮಾನತೆಯನ್ನು ಮಾನವರು ಮಾಡಿದ್ದು ಎಷ್ಟು ಸರಿ? ೧೨ನೇ ಶತಮಾನದಲ್ಲಿ ಮೇಲ್ಜಾತಿಯಲ್ಲಿ ಜನ್ಮ ತಾಳಿದ ಬಸವಣ್ಣ ಅಸ್ಪೃಶ್ಯತೆ ವಿನಾಶಕ್ಕೆ ಶರಣ ಚಳವಳಿ ಆರಂಭಿಸಿದರು. ಅವರು ಆರಂಭಿಸಿದ ಕ್ರಾಂತಿ ಮಹಾರಾಷ್ಟ್ರ, ಉತ್ತರ ಭಾಗದ ಪ್ರಭಾವ ಮೀರಿದೆ. ಆದರೆ ಕರ್ನಾಟಕದ ಆ ಕ್ರಾಂತಿಯ ಪ್ರಭಾವ ಬೀರಿಲ್ಲ. ಆ ಪರಿಣಾಮವೇ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಅಸ್ಪೃಶ್ಯತೆ ತಾಂಡವವಾ ಡುತ್ತಿದೆ.
ಆತ್ಯಾಧುನಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಬಹಳಷ್ಟು ಮುಂದು ವರಿದಿದ್ದು, ನಾಗರಿಕತೆ ನಾಗಾಲೋಟದಲ್ಲಿ ಓಡುತ್ತಿರುವ ಇಂತಹ ಸಂದರ್ಭದಲ್ಲೂ ಅಸ್ಪೃಶ್ಯತೆ ಆಚರಣೆ ಜೀವಂತವಾಗಿ ರುವುದು ಬಹಳ ದುರಂತ. ೨೧ ನೇ ಶತಮಾನದಲ್ಲಿ ದೇಶ ಮುಂದು ವರಿದಿದ್ದು, ಅನೇಕ ಸಂಶೋಧನೆಗಳು ನಡೆದು ಮನುಷ್ಯನೇ ಆಶ್ಚರ್ಯ ಪಡುತ್ತಿದ್ದಾನೆ. ಹಾಗಿದ್ದರೂ ಸಮಾಜದಲ್ಲಿ ಇನ್ನೂ ಅಸ್ಪೃಶ್ಯತೆ ಅಚರಣೆ ನಡೆಯುತ್ತಿರುವುದು ನೋವಿನ ಸಂಗತಿ.
ಮಾಧ್ಯಮಗಳು ಜಾಗೃತವಾಗಿರುವ ಇಂದಿನ ಕಾಲಘಟ್ಟದಲ್ಲೂ ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ನಿಲ್ಲದಿರುವುದು ಕಳವಳಕಾರಿ. ಜಾತಿ ಕಟ್ಟುಪಾಡುಗಳ ಒಳಮರ್ಮ, ಸಾಮಾಜಿಕ ವ್ಯವಸ್ಥೆಯ ಪರಿಕಲ್ಪನೆಯ ಅರಿವನ್ನು ಇಂದಿನ ಸಮಾಜನಕ್ಕೆ ಮೂಡಿಸುವ ಅಗತ್ಯವಿದೆ. ಸವರ್ಣೀಯರು ಆಚರಿಸುತ್ತಿರುವ ಅಸ್ಪೃಶ್ಯತೆ, ಮೇಲು-ಕೀಳು ತಾರತಮ್ಯವನ್ನು ಸವರ್ಣೀಯರೇ ಪ್ರಾಯಶ್ಚಿತದಿಂದ ತೊಡೆದು ಹಾಕಬೇಕಿದೆ.
ಜನರ ಮನಸ್ಥಿತಿ ಬದಲಾಗದ ಹೊರತು ಈ ಕೆಟ್ಟ ಪದ್ಧತಿ ದೂರವಾಗುವುದಿಲ್ಲ. ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಸರಕಾರ ಮತ್ತು ಅಧಿಕಾರಿಗಳು ಶ್ರಮವಹಿಸಬೇಕು. ಶಿಕ್ಷಣದಿಂದಲೇ ಅಸ್ಪೃಶ್ಯತೆ,ಆರ್ಥಿಕ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆ ಹಾಗೂ ಸಮಾನತೆಯ ದಿಕ್ಕು ಕಾಣಬಹುದು. ಆದ್ದರಿಂದ ಎಲ್ಲ ಸಮಾಜದ ಮಕ್ಕಳಿಗೂ ಸಮಾನ ಶಿಕ್ಷಣ ದೊರೆಯುವಂತೆ ಮಾಡಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. ಹೆಗ್ಗೋಠಾರ ಘಟನೆಗೆ ಸಂಬಂಧಿಸಿದ ತಪ್ಪಿತಸ್ಥರನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು. ಆ ಮೂಲಕ ಈ ಘಟನೆಯೇ ಕೊನೆಯಾಗುವಂತೆ ನೋಡಿಕೊಳ್ಳಬೇಕು.