ಗಡಿ ವಿಚಾರದಲ್ಲಿ ಮೈಮರೆಯದಿರಿ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯು ಇಂದು ವಿಚಾರಣೆಗೆ ಬರಲಿದೆ. ಇದು ಅಂತಿಮ ವಿಚಾರಣೆಯಾದ್ದರಿಂದ, ಅಲ್ಲಿನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಸೋಮವಾರ ಉನ್ನತ ಮಟ್ಟದ ಸಮಿತಿಸಭೆ ಕೂಡ ನಡೆಸಿದೆ.
ಇನ್ನೊಂದೆಡೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗೂ ಡಿಸಿಎಂ ದೇವೇಂದ್ರ ಫಡಣವೀಸ್ ಅವರನ್ನೊಳಗೊಂಡ ನಿಯೋಗ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಶೀಘ್ರದ ಭೇಟಿಯಾಗಲು ನಿರ್ಧರಿಸಿದೆ. ಸುಪ್ರೀಕೋರ್ಟ್‌ನಲ್ಲಿ ಗಡಿ ವಿವಾದದ ಬಗ್ಗೆ ವಿಚಾರಣೆಯನ್ನು ತ್ವರಿತಗೊಳಿಸಲು ಮಾಡಬೇಕಾದ ಎಲ್ಲ ಕೆಲಸಗಳ ಸಿದ್ಧತೆ ಮಾಡಿಕೊಂಡಿದೆ. ಆದರೆ ರಾಜ್ಯ ಸರಕಾರ ಯಾವ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ ಎನ್ನಲಾಗಿದೆ.
ಗಡಿ ವಿವಾದದ ಕುರಿತು ಮಹಾರಾಷ್ಟ್ರ ಸರಕಾರ ವಿಶೇಷ ಆಸಕ್ತಿ ತೋರಿಸುತ್ತಿರುವುದರಿಂದ ರಾಜ್ಯ ಸರಕಾರವೂ ತಕ್ಷಣ ಸರ್ವಪಕ್ಷಗಳ ಸಭೆ ಕರೆದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ ಈ ವಿಚಾರವಾಗಿ ಸರಕಾರ ಆಸಕ್ತಿ ತೋರಿದಂತಿಲ್ಲ. ಇದೇ ರೀತಿಯ ಉದಾಸೀನತೆ ತೋರಿದರೆ ಬೆಳಗಾವಿ, ಬೀದರ, ಭಾಲ್ಕಿ, ಕಾರವಾರ ಸೇರಿದಂತೆ ೮೬೫ ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರುವ ಅಪಾಯವಿದೆ. ಆದ್ದರಿಂದ ನಾಡು, ನುಡಿ ವಿಚಾರ ಬಂದಾಗ ಸರಕಾರ ಉದಾಸೀನತೆ ತೋರಬಾರದು.
ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಗೆ ಬದ್ಧವಾಗಿ ರಾಜ್ಯ ಸರಕಾರ ಕೈಗೊಳ್ಳುವ ಕ್ರಮಗಳನ್ನು ಪ್ರತಿಪಕ್ಷಗಳು ಕೂಡ ಬೆಂಬಲಿಸ ಬೇಕು. ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವ ಕನ್ನಡಿಗರ ಹಿತರಕ್ಷಣೆ ಮಾಡುವುದು ಸರಕಾರದ ಕರ್ತವ್ಯ. ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕು. ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಗೋವಾ ವಿಮೋಚನೆಗೆ ಕೆಲಸ ಮಾಡಿದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಪಿಂಚಣಿ ನೀಡುವ ಕೆಲಸವನ್ನು ತ್ವರಿತವಾಗಿ ಮಾಡಬೇಕು. ಗಡಿ, ಭಾಷೆ ವಿಚಾರದಲ್ಲಿ ಸರಕಾರ ಮತ್ತು ಆಡಳಿತ ಯಂತ್ರ ಎಂದೂ ಮೈಮರೆಯಬಾರದು.