ಭಾರತೀಯರೆನ್ನಲು ಹೆಮ್ಮೆಪಡೋಣ..
ದೇಶ ೭೮ನೇ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ವ್ಯಕ್ತಿಯಾಗಲಿ, ದೇಶಕ್ಕಾಗಲಿ ಇದು ಮಾಗುವ ವಯಸ್ಸು. ಅಭಿವೃದ್ಧಿಯ ಪರಿಪಕ್ವತೆಯನ್ನು ದೇಶವಾಸಿ ಗಳೆಲ್ಲರೂ ಅನುಭವಿಸುವ ಕಾಲ. ಇಷ್ಟು ವರ್ಷಗಳಲ್ಲಿ ನಮ್ಮ ಸಾಧನೆಯ ಪಟ್ಟಿಯನ್ನು ನೋಡಿದರೆ ಖುಷಿ ಪಡಲು ಬೇಕಾದಷ್ಟು ಕಾರಣಗಳಿವೆ.
ಹಾಗೆಯೇ ಖುಷಿಪಡದಿರಲೂ ಕಾರಣಗಳಿವೆ. ಕೇವಲ ಮೂರು ದಶಕಗಳ ಹಿಂದೆ ಐಎಂಎಫ್ ಮುಂದೆ ಸಾಲಕ್ಕಾಗಿ ಕೈ ಚಾಚಿ ನಿಂತಿದ್ದ ನಾವು, ಈಗ ವಿಶ್ವದಬಲಾಢ್ಯ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿದ್ದೇವೆ. ಚಂದಿರನ ಅಂಗಳಕ್ಕೆ ಮಾತ್ರವಲ್ಲ ಸೂರ‍್ಯನ ಕ್ಷಿತಿಜಕ್ಕೂ ನೌಕೆ ಕಳುಹಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾರೂ ಮಾಡದ ಸಾಧನೆ ಮೆರೆದಿದ್ದೇವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದೇವೆ. ಐಟಿ ಕ್ಷೇತ್ರದ ಟಾಪ್ ಕಂಪನಿಗಳಲ್ಲಿ ಭಾರತೀಯರು ಮುಖ್ಯಸ್ಥರಾಗಿದ್ದಾರೆ. ವಿಶ್ವದ ಟಾಪ್ ೧೦ ಬಿಲಿಯನೇರ್‌ಗಳಲ್ಲಿ ಭಾರತೀಯರೂ ಸ್ಥಾನ ಪಡೆದಿದ್ದಾರೆ. ಬ್ರಿಟನ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಭಾರತೀಯ ಮೂಲದವರು ನೇತಾರರಾಗಿದ್ದಾರೆ.
ಇಷ್ಟೆಲ್ಲಾ ಸಾಧನೆಗಳ ನಡುವೆಯೂ ದೇಶದ ಮುಂದುವರಿದ ರಾಜ್ಯಗಳಲ್ಲಿ ಒಂದಾದ ಕರ್ನಾಟಕದ ಒಂದೂವರೆ ಕೋಟಿ ಜನರು ಇಂದಿಗೂ ಬಿಪಿಎಲ್ಕಾರ್ಡ್ ಮೂಲಕ ಸಬ್ಸಿಡಿ ದರದಲ್ಲಿ ಅಕ್ಕಿ ಪಡೆದು ಹೊಟ್ಟೆ ಹೊರೆಯುವ ಪರಿಸ್ಥಿತಿ ಇದೆ. ಇನ್ನುಳಿದ ರಾಜ್ಯಗಳ ಪರಿಸ್ಥಿತಿ ಇನ್ನಷ್ಟೂ  ದಯನೀಯ ವಾಗಿರಬಹುದು. ಈ ವೈರುಧ್ಯಗಳ ನಡುವೆಯೇ ಮುಂದುವರಿದ ರಾಷ್ಟ್ರಗಳಿಗೆ ಸರಿಸಮನಾಗಿ ಎದೆ ಸೆಟೆಸಿ ನಿಲ್ಲಲು ನಾವು ಸಜ್ಜಾಗಿದ್ದೇವೆ. ಈ ಮಧ್ಯೆ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ನಮ್ಮ ನೆರೆಹೊರೆ ದೇಶಗಳಲ್ಲಿ ಪ್ರಜಾಪ್ರಭುತ್ವಕ್ಕೆ ಸಂಚಕಾರ ಎದುರಾಗಿದೆ.
ಭಾರತದ ಪ್ರಜಾಪ್ರಭುತ್ವಕ್ಕೂ ಮುಂದೊಂದು ದಿನ ಆತಂಕ ಎದುರಾಗಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಕಳವಳಕ್ಕೆ ಕಾರಣವಿಲ್ಲ. ಕಳೆದ ಏಳೂವರೆ ದಶಕಗಳಲ್ಲಿ ದೇಶದ ಪ್ರಜಾಸತ್ತೆ ಬಲವಾಗುತ್ತಲೇ ಸಾಗಿದೆ. ದೇಶದ ಸಂಸದೀಯ ಆಡಳಿತ ವ್ಯವಸ್ಥೆ ನೆಹರೂ ಕಾಲದ ಏಕಪಕ್ಷದ ಆಡಳಿತದಿಂದ ಸಮ್ಮಿಶ್ರ ಆಡಳಿತಕ್ಕೆ ಹೊರಳಿದರೂ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆಯಾಗಿಲ್ಲ. ೧೯೭೫ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದ ವಿದ್ಯಮಾನಕ್ಕೆ ದೇಶಾದ್ಯಂತ ಕಂಡು ಬಂದ ಪ್ರತಿಕ್ರಿಯೆ ನಮ್ಮ ಪ್ರಜಾಪ್ರಭುತ್ವದ ಅಂತಃಸತ್ವ ಎಷ್ಟು ಗಟ್ಟಿ ಎನ್ನುವುದನ್ನು ತೋರಿಸಿಕೊಟ್ಟಿದೆ.
೧೪೦ ಕೋಟಿ ಜನಸಂಖ್ಯೆಯ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವು, ನೂರಾರು ರಾಜಕೀಯ, ಆರ್ಥಿಕ, ಸಾಮಾಜಿಕ ಬಿಕ್ಕಟ್ಟುಗಳನ್ನು, ಜಾಗತಿಕ ವಿಪ್ಲವಗಳನ್ನು, ಪ್ರಾಕೃತಿಕ ವಿಕೋಪಗಳನ್ನು, ರೋಗರುಜಿನಗಳನ್ನು, ಅನ್ಯದೇಶಗಳ ಆಕ್ರಮಣಗಳನ್ನು ಎದುರಿಸಿಯೂ ಗಟ್ಟಿಯಾಗಿ ನಿಂತಿದೆ. ಇದೇ ನಾವು ಹೆಮ್ಮೆಪಡಬೇಕಾದ ಸಂಗತಿ.