ಜಾತೀಯತೆ ಪ್ರದರ್ಶನ ನಾಚಿಕೆಗೇಡು
ತಮಗೆ ಕ್ಷೌರ ಮಾಡುವಂತೆ ಪರಿಶಿಷ್ಟರು ಕೇಳಿದ ಕಾರಣಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಮಹದೇವಪುರ ಹಾಗೂ ಅಕ್ಕಪಕ್ಕದ ಊರುಗಳ ೧೦ ಕ್ಷೌರದ ಅಂಗಡಿ ಗಳನ್ನು ಕ್ಷೌರಿಕರು ಸಾಮೂಹಿಕವಾಗಿ ಬಂದ್ ಮಾಡಿದ್ದಾರೆ ಎಂಬುದು ವರದಿಯಾಗಿದೆ. ತಹಸೀಲ್ದಾರ್ ಮತ್ತು ಪೊಲೀಸರು ಕ್ಷೌರದ ಅಂಗಡಿಯವರ ಮನವೊಲಿಸಿದರೂ ಕಳೆದ ೨೦ದಿನಗಳಿಂದ ಮಹದೇವಪುರದ ೭, ಅಕ್ಕಪಕ್ಕದ ಊರುಗಳಲ್ಲಿನ ೩ ಅಂಗಡಿಗಳು ತೆರೆಯುತ್ತಲೇ ಇಲ್ಲ.
ಇದರಿಂದಾಗಿ ಗ್ರಾಮದ ಜನರು ಕ್ಷೌರಕ್ಕಾಗಿ ಅರಕೆರೆ, ಮಂಡ್ಯಕೊಪ್ಪಲು ವೃತ್ತ ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದೇವತೆಯ ಗುಜ್ಜು ಕೋಲನ್ನು ಮುಟ್ಟಿದ ಬಾಲಕನ ಮೇಲೆ ದೈಹಿಕ ಹ ನಡೆಸಿ, ಅವನ ಕುಟುಂಬಕ್ಕೆ ಬಹಿಷ್ಕಾರದ ಬೆದರಿಕೆ ಒಡ್ಡಿದ ಪ್ರಸಂಗವೊಂದು ಎರಡು ತಿಂಗಳ ಹಿಂದಷ್ಟೇ ಕೋಲಾರ ಜಿಲ್ಲೆಯಿಂದ ವರದಿಯಾಗಿತ್ತು. ಕಳೆದ ವಾರ ಕೂಡ ಚಾಮರಾಜನಗರ ಜಿಲ್ಲೆಯ ಹೆಗ್ಗೋಠಾರ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ನೀರು ಕುಡಿದರೆನ್ನುವ ಕಾರಣಕ್ಕಾಗಿ, ಕಿರು ನೀರು ಸರಬರಾಜು ಟ್ಯಾಂಕ್ ಅನ್ನು ಶುದ್ಧೀಕರಿಸಿರುವ ಅಮಾನವೀಯ ಪ್ರಸಂಗ ನಡೆದಿತ್ತು.
ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ರಾಜ್ಯವೇ ತಲೆತಗ್ಗಿಸುವಂತಾಗಿದೆ. ಪರಿಶಿಷ್ಟರನ್ನು ಹೀನಾಯವಾಗಿ ಕಾಣುವ ಪ್ರಸಂಗಗಳು ರಾಜ್ಯದ ವಿವಿಧ ಭಾಗಗಳಿಂದ ನಿರಂತರವಾಗಿ ವರದಿಯಾಗುತ್ತಲೇ ಇವೆ. ಇಂತಹ ಘಟನೆಗಳು ಅಸ್ಪೃಶ್ಯತೆಯು ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತೀಯತೆಗೆ ಉದಾಹರಣೆಗಳು. ಇಂಥ ಪ್ರಕರಣಗಳು ವರದಿಯಾದಾಗ ಸರಕಾರ ನಡೆಸುವ ವಿಚಾರಣೆ ತಾರ್ಕಿಕ ಅಂತ್ಯ ಮುಟ್ಟಿದ ಉದಾಹರಣೆಗಳು ಕಡಿಮೆ.
ಪರಿಶಿಷ್ಟರ ಸ್ವಾಭಿಮಾನವನ್ನು ರಕ್ಷಿಸುವ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಂವಿಧಾನದ ಧರ್ಮನಿರಪೇಕ್ಷ  ರೂಪದ ಸಂರಕ್ಷಣೆಗೆ ಸರಕಾರ ಬದ್ಧವಾಗಿದ್ದರೆ ಸಾಕು, ಜಾತಿ ತಾರತಮ್ಯದ ಬಹುತೇಕ ಘಟನೆಗಳಿಗೆ ಕಡಿವಾಣ ಬೀಳುತ್ತದೆ. ಇಂಥ ನಡವಳಿಕೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ, ನಾಗರಿಕ ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆಗೆ ಅವಕಾಶವಿಲ್ಲ ಎನ್ನುವುದನ್ನು ಜಾತಿವಾದಿ ಮನಸ್ಸುಗಳಿಗೆ ಸರಕಾರ ಮನವರಿಕೆ ಮಾಡಬೇಕು. ಭಾರತ ಸ್ವಾತಂತ್ರ್ಯ ಪಡೆದು ೭೫ ವರ್ಷಗಳಾದ ಬಳಿಕವೂ ಜಾತೀಯತೆಯ ಪ್ರದರ್ಶನ ಎಗ್ಗಿಲ್ಲದೆ ನಡೆಯುತ್ತಿರುವುದು ನಾಚಿಕೆಗೇಡು.