ವೃತ್ತಿಪರರ ಮೇಲೆ ಹಲ್ಲೆ ಪ್ರಕರಣ: ಕಾನೂನಿನ ರಕ್ಷಣೆ ಬೇಕು
ಇತ್ತೀಚಿನ ದಿನಮಾನಗಳಲ್ಲಿ ವೃತ್ತಿಪರರು – ಅಂದರೆ ವಿಶೇಷವಾಗಿ ವೈದ್ಯರು, ವಕೀಲರು, ಪತ್ರಕರ್ತರ ಮೇಲೆ ಹಲ್ಲೆ ಮತ್ತು ದಾಳಿ ಪ್ರಕರಣಗಳು ಹೆಚ್ಚುತ್ತಿವೆ.
ಹಳೆ ದ್ವೇಷ, ಸಮಾಜ ಘಾತುಕ ಶಕ್ತಿಗಳ ಕೆಂಗಣ್ಣು ಇತ್ಯಾದಿ ಕಾರಣಗಳು ಏನೇ ಇರಲಿ, ಈ ರೀತಿ ದಾಳಿಯ ಪ್ರಕರಣಗಳು ಹಲ್ಲೆಗಷ್ಟೇ ಸೀಮಿತವಾಗಿಲ್ಲ, ಕೊಲೆಮಾಡುವ ಮಟ್ಟಕ್ಕೂ ಹೋಗುತ್ತವೆ. ಸಮಾಜದಲ್ಲಿ ಈ ಮೂರೂ ವರ್ಗದ ವೃತ್ತಿಪರರು ತಮ್ಮದೇ ಆದ ನೆಲೆಗಟ್ಟುಗಳಲ್ಲಿ ಸಾಮಾಜಿಕ ಆರೋಗ್ಯ ಮತ್ತು ಸುವ್ಯವಸ್ಥೆಗಾಗಿ ಕೆಲಸ ಮಾಡುತ್ತಾರೆ. ಈ ರೀತಿ ಕರ್ತವ್ಯಗಳನ್ನು  ನಿಭಾಯಿಸು ವಾಗ ಅಪರೂಪಕ್ಕೊಮ್ಮೆ ಕೈಮೀರಿದ ಕಾರಣಗಳಿಗಾಗಿ ಈ ವೃತ್ತಿಪರರಿಂದ ಸೇವೆಗಳನ್ನು ಪಡೆದುಕೊಂಡವರಿಗೆ  ಸೋಲಾ ಗಬಹುದು.
ಅಂತಹ ಸಂದರ್ಭದಲ್ಲಿ ಆಯಾ ವಘ್ದ ವೃತ್ತಿಪರರ ಮೇಲೆ ಹಲ್ಲೆ, ದಾಳಿಗಳು ನಡೆಯುವುದು ಒಳ್ಳೆಯ ಪ್ರವೃತ್ತಿ ಅಲ್ಲ. ವೈದ್ಯರು ಚಿಕಿತ್ಸೆ ನೀಡುವುದು ಅಥವಾಶಸ್ತ್ರಚಿಕಿತ್ಸೆ ಮಾಡು ವುದು ರೋಗಿಯ ಶುಶ್ರೂಷೆಗಾಗಿಯೇ ಹೊರತು ಹಾನಿಯೆಸಗಬೇಕು ಅಥವಾ ಸಾಯಿಸಿ ಬಿಡಬೇಕು ಎನ್ನುವ ಉದ್ದೇಶದಿಂದಲ್ಲ. ಹಾಗಿದ್ದರೂ ಅವರ ಕೈಮೀರಿದ ಕಾರಣಗಳಿಗೆ ಚಿಕಿತ್ಸೆಗೆ ಬಂದ ರೋಗಿಗೆ ಕಾಯಿಲೆ ವಾಸಿಯಾಗದಿರಬಹುದು ಅಥವಾ ಪ್ರಾಣವೇ ಹೋಗಲೂ ಬಹುದು.
ಅಂತಹ ಸಂದರ್ಭದಲ್ಲಿ ರೋಗಿಯ ಸಂಬಂಧಿಕರು ವೈದ್ಯರ ಮೇಲೆ ಏರಿ ಹೋಗುವುದು, ಹಲ್ಲೆ ನಡೆಸುವುದು ಅಥವಾ ಅವರ ಜೀವವನ್ನೇ ತೆಗೆದುಬಿಡುವುದು ನಾಗರಿಕ ಸಮಾಜದ ನಡತೆಯಲ್ಲ. ಅದೇ ರೀತಿ ವಕೀಲರು ಸಹ ತಮ್ಮ ಕಕ್ಷಿದಾರರಿಗೆ ನ್ಯಾಯಒದಗಿಸಲು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಅವರಿಂದ ಪಡೆದ ಸೇವೆಯಿಂದ ತನಗೆ  ಅನುಕೂಲ ವಾಗಲಿಲ್ಲ ವೆಂದೋ, ಮತ್ಯಾವುದೋ ಕಾರಣಕ್ಕೆ ಹಲ್ಲೆ ಮಾಡುವುದು, ಕೊಲೆ ಬೆದರಿಕೆ ಒಡ್ಡುವುದು ಸಲ್ಲ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಕೀಲರೊಬ್ಬರ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವ ಎರಡು ವಿಭಾಗದವರ ಮಧ್ಯೆಯೇ ಈ ರೀತಿ ಸಂಘರ್ಷಗಳು ಬಂದರೆ ಸಾಮಾಜಿಕ ಹಿತವನ್ನು ರಕ್ಷಿಸುವವರು ಯಾರು? ಪತ್ರಕರ್ತರೂ ಸಹ ಸಮಾಜದ ಲೋಪದೋಷಗಳನ್ನು ಎತ್ತಿ ತೋರಿಸಿ ಅದನ್ನು ಸರಿಪಡಿಸುವತ್ತ ತಮ್ಮದೇ ಆದ ಸೇವೆ ಸಲ್ಲಿಸುತ್ತಾರೆ. ಇವರಿಗೆಲ್ಲ ಸೂಕ್ತ ರಕ್ಷಣೆ ನೀಡಬೇಕಾದ್ದು ಸರಕಾರದ ಕರ್ತವ್ಯ.