ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಸರಿಯಲ್ಲ
ಪರಿಶಿಷ್ಟ ಜಾತಿ ಸಮುದಾಯಗಳ ನಡುವೆ ಒಳ ಮೀಸಲನ್ನು ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆಸುತ್ತಿದ್ದ ಹೋರಾಟಗಾರರ ಜತೆ ಸರಕಾರ ಮಾತುಕತೆ ನಡೆಸಿ ಸದಾಶಿವ ಆಯೋಗದ ವರದಿಯಕುರಿತು ಸರಕಾರದ ಅಭಿಪ್ರಾಯವೇನೆಂದು ಪ್ರಕಟಿಸಬೇಕಿತ್ತು.
ಆದರೆ ಅದರ ಬದಲು ಹೋರಾಟ ನಿರತರ ಮೇಲೆ ಪೋಲೀಸ್ ದೌರ್ಜನ್ಯ ನಡೆಸಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಹೋರಾಟ, ಪ್ರತಿಭಟನೆ ಮೂಲಕ ತಮ್ಮ ಹಕ್ಕು ಮಂಡಿಸಬಹುದು. ಆಡಳಿತದಲ್ಲಿರುವವರು ಅಂತಹವರ ಧ್ವನಿಗೆ ಕಿವಿಯಾಗಿ, ಅವರ ಸಮಸ್ಯೆ ಗಳನ್ನು ಪರಿಹರಿಸುವ ಕೆಲಸ ಮಾಡಬೇಕು. ಆದರೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳ ಮೀಲು ಜಾರಿಗೊಳಿಸಬೇಕೆಂದು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಲಾಗಿದ್ದು ಪ್ರಜಾ ಪ್ರಭುತ್ವದ ವಿರೋಧಿ ನಡೆಯಾಗಿದೆ.
ಪರಿಶಿಷ್ಟ ಜಾತಿ ಸಮುದಾಯದ ಮೀಸಲಿನಲ್ಲಿ ಹಿಂದುಳಿದಿರುವಿಕೆಯ ಕಾರಣದಿಂದ ವಂಚನೆಗೊಳಗಾದವರಿಗೆ ಒಳಮೀಸಲು ನೀಡಬೇಕೆಂಬ ಒತ್ತಾಯ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಈ ಕುರಿತಂತೆ ನ್ಯಾ.ಸದಾಶಿವ ಆಯೋಗವು ವರದಿಯನ್ನು ನೀಡಿ ಹಲವು ವರ್ಷಗಳೇ ಕಳೆದಿವೆ. ಇದುವರೆಗೆ ರಾಜ್ಯ ಸರಕಾರ ಆ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿಲ್ಲ ಮತ್ತು ಸರಕಾರ ಈ ಕುರಿತು ತನ್ನ ನಿಲುವು ಏನೆಂದು ಪ್ರಕಟಿಸಿಲ್ಲ.
ಒಳ ಮೀಸಲಿಗಾಗಿ ಹೋರಾಟದಲ್ಲಿ ತೊಡಗಿ ರುವವರ ಮೇಲೆ ಪೊಲೀಸ್ ದಾಳಿಯ ಮೂಲಕ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುವ ಮೂಲಕ ಸರಕಾರ ಒಳ ಮೀಸಲನ್ನು ವಿರೋಽಸುವ ಇಂಗಿತ ವ್ಯಕ್ತಪಡಿಸಿದೆಯೇ? ಹಾಗೆ ನೋಡಿದರೆ ಒಳಮೀಸಲು ಜಾರಿಗೆ ಶಿಫಾರಸು ಮಾಡಿರುವ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆಎಂದು ಅಧಿಕಾರಕ್ಕೆ ಬಂದಿರುವ ರಾಜ್ಯ ಸರಕಾರ ಈಗ ಹೋರಾಟಗಾರರನ್ನೇ ಬಂಧಿಸಲು ಹೊರಟಿರುವುದು ವಿಷಾದನೀಯ.
ಆದ್ದರಿಂದ ರಾಜ್ಯ ಸರಕಾರ ಹೋರಾಟಗಾರರ ನ್ಯಾಯಬದ್ಧ ಬೇಡಿಕೆಯನ್ನು ಈಡೇರಿಸಬೇಕು. ಪೊಲೀಸರಿಂದ ಹಲ್ಲೆಗೊ ಳಗಾದ ಗಾಯಾಳುಗಳಿಗೆ ಸೂಕ್ತ ಪರಿಹಾರ ಮತ್ತು ಉಚಿತ ಆರೋಗ್ಯ ಸೇವೆಯನ್ನು ನೀಡಬೇಕು.