ಅಧಿವೇಶನಕ್ಕೆ ಗೈರಾಗುವುದು ಸರಿಯಲ್ಲ
ಡಿಸೆಂಬರ್ ೧೯ ರಿಂದ ೩೦ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆ ಈ ಬಾರಿಯ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬಿಸಿ ವಾತಾವರಣ ಸೃಷ್ಟಿ ಯಾಗುವ ಸಾಧ್ಯತೆ ಇದೆ. ಆದರೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರು ಚಳಿಗಾಲದಅಧಿವೇಶನಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರಮುಖ ರಾಜಕೀಯ ನಾಯಕರೇ ಅಧಿವೇಶನವನ್ನು ಹಗುರವಾಗಿ ಪರಿಗಣಿಸಿದಂತಿದೆ. ಕಳೆದ ಬಾರಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಪುಂಡರು ರಾಯಣ್ಣ ವಿಗ್ರಹ ವಿರೂಪಗೊಳಿಸಿದ್ದರು. ಖಡ್ಗ ಮತ್ತು ಗುರಾಣಿ ಕಿತ್ತಾಕಿ ಮುಖದ ಮೇಲೆ ಮಸಿಬಳಿಯುವ ಕೆಲಸ ಮಾಡಿದ್ದರು. ಅಧಿವೇಶನದ ಸಂದರ್ಭದ ಈ ಕೃತ್ಯ ಬೆಳಗಾವಿಯಲ್ಲಿ ಉದ್ವಿಗ್ನದ ವಾತಾವರಣ ಸೃಷ್ಟಿ ಮಾಡಿತ್ತು.
ಅಷ್ಟೇ ಅಲ್ಲ, ರಾತ್ರೋ ರಾತ್ರಿ ಸರಕಾರಿ ವಾಹನಗಳಿಗೂ ಪುಂಡರು ಹಾನಿ ಉಂಟು ಮಾಡಿದ್ದರು. ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆಗೆ ಹಾನಿ ಹಾಗೂ ಮಹಾರಾಷ್ಟ್ರದ ಕೊಪುರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ ವಿಚಾರವಾಗಿ ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಎಂಇಎಸ್ ಪುಂಡಾಟಿಕೆ ವಿರುದ್ಧ ವಿಧಾನ ಸಭೆ ಯಲ್ಲಿ ನಿರ್ಣಯ ಮಂಡಿಸಿ ಅಂಗೀಕರಿಸಲಾಗಿತ್ತು. ಮೂರೂ ಪಕ್ಷದ ಸದಸ್ಯರು ಎಂಇಎಸ್ ಪುಂಡಾಟಿಕೆಯನ್ನು ಖಂಡಿಸಿದ್ದರು.
ಸರ್ವಾನುಮತದಿಂದ ಈ ನಿರ್ಣಯವನ್ನು ಅಂಗೀಕಾರ ಮಾಡಲಾಗಿತ್ತು. ಈ ಮೂಲಕ ಎಂಇಎಸ್‌ಗೆ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಗಡಿ ವಿವಾದ ತೀವ್ರಗೊಂಡಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಹಾನಿ ಉಂಟು ಮಾಡಿದ್ದಾರೆ. ಅಲ್ಲದೆ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಇಂತಹ ಸಂದರ್ಭದಲ್ಲಿ ನಡೆಯುವ ಅಧಿವೇಶನಕ್ಕೆ ಎಲ್ಲ ಜನಪ್ರತಿನಿಧಿಗಳು ಹಾಜರಾಗಿ, ಗಡಿ ವಿವಾದದ ಕುರಿತು ಚರ್ಚಿಸಬೇಕಿದೆ. ಆ ಮೂಲಕ ಮಹಾರಾಷ್ಟ್ರ ಸರಕಾರಕ್ಕೆ ತಕ್ಕ ಉತ್ತರ ನೀಡಬೇಕಿದೆ. ಎಂಇಎಸ್ ಪುಂಡಾಟಿಕೆಗೆ ತಿಲಾಂಜಲಿ ಇಡಬೇಕಿದೆ.
ಅದು ಬಿಟ್ಟು ‘ನಾನು ಅಧಿವೇಶನಕ್ಕೆ ಹಾಜರಾಗುವುದಿಲ್ಲ’ ಎಂದು ಹೇಳುವುದು ಕರ್ತವ್ಯದಿಂದ ನುಣುಚಿಕೊಂಡಂತೆ.