ಹೇಳಿಕೆಗೂ ಮೊದಲು ಎಚ್ಚರವಹಿಸಲಿ
ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಪಕ್ಷಗಳ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ಏರಿಕೆಯಾಗುವುದುಸರ್ವೇ ಸಾಮಾನ್ಯ. ಅದೇ ರೀತಿ ಕರ್ನಾಟಕದಲ್ಲಿಯೂ ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ನಿತ್ಯ ಬಿರುಸಿನ ವಾಗ್ದಾಳಿ, ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.
ಚುನಾವಣೆಯ ಸಮಯದಲ್ಲಿ ವಾಕ್ಸಮರಗಳು ಸಾಮಾನ್ಯ. ಆದರೆ ಯಾವುದೇ ನಾಯ ಕರು ಹೇಳಿಕೆ ನೀಡುವ ಮೊದಲು ತಮ್ಮ ಮಿತಿಯನ್ನು ಮೀರಬಾರದು ಎನ್ನುವುದನ್ನು ಅರಿತುಕೊಳ್ಳಬೇಕು. ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ‘ವಿಷಯಾಂತರ ಮಾಡುವುದಕ್ಕಾಗಿ ಬಿಜೆಪಿ ಸರಕಾರ ಮಂಗಳೂರು ಬ್ಲಾಸ್ಟ್ ಅನ್ನು ಉಗ್ರರ ಕೃತ್ಯವೆಂದು ಹೇಳಿದೆ.
ಯಾವುದೇ ತನಿಖೆಯಿಲ್ಲದೇ ಉಗ್ರರೆಂದು ಸರಕಾರ ಹೇಗೆ ಘೋಷಿಸಿತು? ಅದೇನು ಪುಲ್ವಾಮ ಮಾದರಿಯಲ್ಲಿ ದಾಳಿಯಾಗಿತ್ತೇ ಅಥವಾ ಮುಂಬೈ ಟೆರರ್ ಅಟ್ಯಾಕ್ ಮಾದರಿಯಲ್ಲಿ ಆಗಿತ್ತೇ?’ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಸರಕಾರದ ಆಡಳಿತ ವೈಫಲ್ಯ ವನ್ನು ಎತ್ತಿ ಹಿಡಿಯುವ ಸಲುವಾಗಿ ಡಿಕೆ ಶಿವಕುಮಾರ್ ಅವರು ಈ ರೀತಿಯ ಹೇಳಿಕೆಯ ನ್ನು ನೀಡಿರಬಹುದು.
ಆದರೆ ರಾಷ್ಟ್ರದ ಭದ್ರತೆ ಹಾಗೂ ಏಕತೆಯ ವಿಷಯದಲ್ಲಿಯೂ ಈ ರೀತಿಯ ಕ್ಷುಲಕ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಇದಕ್ಕೂ ಕೆಲ ದಿನಗಳ ಮೊದಲು ಮಧ್ಯಪ್ರದೇಶದ ಕಾಂಗ್ರೆಸ್‌ನ ಮುಖಂಡ ರಾಜ ಪಟೇರಿಯಾ ಅವರು ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲಿ’ ಎನ್ನುವ ಹೇಳಿಕೆಯನ್ನು ನೀಡಿದ್ದರು. ಪ್ರಧಾನಿಯ ವಿರುದ್ಧ ಈ ರೀತಿಯ ಹೇಳಿಕೆ ನೀಡುವುದು ಒಪ್ಪುವ ಮಾತಲ್ಲ. ಪ್ರಧಾನಿ ಮಾತ್ರವಲ್ಲ ಯಾವುದೇ ವ್ಯಕ್ತಿಯ ವಿರುದ್ಧ ಈ ರೀತಿಯ ಹೇಳಿಕೆ ನೀಡುವುದು ರಕ್ಷಣೆಯ ದೃಷ್ಟಿ ಯಿಂದ ಸರಿಯಲ್ಲ ಎನ್ನುವುದನ್ನು ಎಲ್ಲ ನಾಯಕರು ಅರ್ಥೈಸಿಕೊಳ್ಳಬೇಕು. ಆದ್ದರಿಂದ ಯಾವುದೇ ನಾಯಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಈ ರೀತಿಯ ವಿವಾದಾತ್ಮಕ ಅಥವಾ ಹಿಂಸಾತ್ಮಕ ಹಾಗೂ ಭದ್ರತೆಯ ವಿಷಯದಲ್ಲಿಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.