ಸ್ಥಳೀಯ ಚುನಾವಣೆ ವಿಳಂಬ ಬೇಡ
ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಜನರ ಪಾಲ್ಗೊಳ್ಳುವಿಕೆ ಮತ್ತು ಪ್ರಾತಿನಿಧ್ಯ ಬಹಳ ಮುಖ್ಯವೆಂಬ ಆಶಯದಿಂದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್ ಸಾಬ್ ಅವರು ವಿಶೇಷ ಮುತುವರ್ಜಿ ವಹಿಸಿ ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳನ್ನು ಅಸ್ತಿತ್ವಕ್ಕೆ ತಂದು, ಜನರಕೈಗೆ ಅಧಿಕಾರ ನೀಡಿದರು.
ಅಂದಿನಿಂದ ಚುನಾವಣೆಯ ಮೂಲಕ ಆಯ್ಕೆಯಾಗುತ್ತಿದ್ದ ಸ್ಥಳೀಯ ಜನಪ್ರತಿನಿಧಿಗಳು ಸ್ಥಳೀಯ ಸಮಸ್ಯೆಗಳಿಗೆ ಪೂರಕವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಚುನಾವಣೆ ನಡೆಯದ ಕಾರಣ ಒಂದು ವರ್ಷದಿಂದ ಜನಪ್ರತಿನಿಧಿಗಳ ಆಳ್ವಿಕೆ ಇಲ್ಲ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲೆಲ್ಲ ಅಧಿಕಾರಿಗಳಿದ್ದೇ ಕಾರುಬಾರು ಎನ್ನುವಂತಾಗಿದೆ.
ಸಾಮಾನ್ಯ ಜನರೊಂದಿಗೆ ಅಧಿಕಾರಿಗಳು ನಡೆದುಕೊಳ್ಳುವ ಕುರಿತು ಅನೇಕ ಕಡೆ ದೂರು ದಾಖಲಾಗಿವೆ. ಇದಕ್ಕೆಲ್ಲ ಕಾರಣ ಸರಿಯಾದ ಸಮಯಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೇ ಇರುವುದು. ಚುನಾವಣೆ ವಿಳಂಬ ಮಾಡಲು ವಾಸ್ತವ ಕಾರಣ ಬೇರೆ ಇದ್ದರೂ ರಾಜ್ಯ ಸರಕಾರ ಮಾತ್ರ ಮೀಸಲು ಗೊಂದಲದ ಕಾರಣ ನೀಡುತ್ತಾ ಚುನಾವಣೆ ಯನ್ನು ಮುಂದೂಡುತ್ತಲೇ ಸಾಗಿದೆ. ಇದೇ ಕಾರಣಕ್ಕೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಐದು ಲಕ್ಷ ರುಪಾಯಿ ದಂಡವನ್ನೂ ಹಾಕಿದೆ. ಹೈಕೋರ್ಟ್ ಚಾಟಿ ಯಿಂದಾಗಿ ಶೀಘ್ರ ದಲ್ಲೇ ಚುನಾವಣೆ ನಡೆಯುತ್ತದೆ ಎಂದು ಭಾವಿಸಲಾಗಿತ್ತು.
ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಅಂತಿಮಗೊಳಿಸುವ ಪ್ರಕ್ರಿಯೆ ಯನ್ನು ಪೂರ್ಣಗೊಳಿಸಲು ರಾಜ್ಯ ಸರಕಾರಕ್ಕೆ ಮಾರ್ಚ್ ೩೧ರವರೆಗೆ ಸುಪ್ರೀಂಕೋರ್ಟ್ ಕಾಲಾವಕಾಶ ನೀಡಿದೆ. ಇದರಿಂದ ರಾಜ್ಯ ಸರಕಾರಕ್ಕೆ ಚುನಾವಣೆ ವಿಳಂಬ ಮಾಡಲು ಮತ್ತಷ್ಟು ಕಾಲಾವಕಾಶ ಸಿಕ್ಕಂತಾಗಿದೆ. ಸರಕಾರ ಮತ್ತು ನ್ಯಾಯಾಲಯಗಳ ಆದೇಶದಿಂದ ಗ್ರಾಮಗಳ ಅಭಿವೃದ್ಧಿ ಮಾತ್ರ ಕುಂಟಿತವಾಗುತ್ತಿರುವುದು ಸುಳ್ಳಲ್ಲ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾದ್ದರಿಂದ ಅಭಿವೃದ್ಧಿ, ಆಡಳಿತ ಜನಪ್ರತಿನಿಽಗಳ ಕೈಯಲ್ಲೇ ಇರಬೇಕು.
ಆದ್ದರಿಂದ ಸುಪ್ರಿಂಕೋರ್ಟ್ ಕೊಟ್ಟಿರುವ ಗಡುವಿನೊಳಗೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಅಂತಿಮ ಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಆ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಆದಷ್ಟು ಬೇಗ ಚುನಾವಣೆ ನಡಯು ವಂತೆ ನೋಡಿಕೊಳ್ಳಬೇಕು.