ಜಾನುವಾರು ಸಾಕಾಣಿಕೆಯಲ್ಲಿ ಶಿಸ್ತು ಅಗತ್ಯ
ಇತ್ತೀಚೆಗೆ ಕಾಣಿಸಿಕೊಂಡ ಚರ್ಮಗಂಟು ರೋಗದಿಂದ ೨೧,೩೦೫ ಜಾನುವಾರುಗಳು ಮೃತಪಟ್ಟಿವೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ವಿಧಾನಸಭೆ ಯಲ್ಲಿ ಹೇಳಿದ್ದಾರೆ.
ಈಗಾಗಲೇ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆಯಾದರೂ ರೈತರು ಜಾನುವಾರು ಸಾಕಾಣಿಕೆಯಲ್ಲಿ ಶಿಸ್ತು ಅಳವಡಿಸಿ ಕೊಳ್ಳದಿರುವುದಕ್ಕೇ ಆಗಾಗ ಇಂತಹ ರೋಗಗಳು ಹಬ್ಬುತ್ತಿವೆ ಎಂಬುದನ್ನು ಗಮನಿಸಬೇಕು. ನಮ್ಮಲ್ಲಿ ಬಹುತೇಕ ರೈತರು ವೈಜ್ಞಾನಿಕ ರೀತಿಯಲ್ಲಿ ರಾಸುಗಳನ್ನು ಸಾಕುತ್ತಿಲ್ಲ. ಸಾಂಪ್ರದಾಯಿಕ ಕೊಟ್ಟಿಗೆಗಳಲ್ಲಿ ಗಾಳಿ, ಬೆಳಕು ತೀರಾ ಕಡಿಮೆ. ಹಲವರು ಹಗಲು ಹೊತ್ತಿನಲ್ಲೂ ಹೊರಗೆ ಕಟ್ಟುವುದಿಲ್ಲ.
ಸದಾ ಕತ್ತಲೆಯ ವಾತಾವರಣದಲ್ಲಿ ದನಕರುಗಳನ್ನು ಕಟ್ಟುವುದರಿಂದ ಸಹಜವಾಗಿಯೇ ಅವು ಒತ್ತಡ ಅನುಭವಿಸುತ್ತವೆ. ಚರ್ಮರೋಗ ಬಾಧಿಸುತ್ತದೆ. ರಾಸುಗಳನ್ನು ಬೆಳಗ್ಗೆ ಬಿಸಿಲಿಗೆ ಕಟ್ಟುವುದರಿಂದ ಸೂರ್ಯರಶ್ಮಿಯಿಂದ ದೇಹದಲ್ಲಿ ವಿಟಮಿನ್ ‘ಡಿ’ ಉತ್ಪತ್ತಿಯಾಗುತ್ತದೆ. ಆಹಾರದಿಂದ ಕ್ಯಾಲ್ಸಿಯಂ ಅಂಶವನ್ನು ಹೀರಿಕೊಳ್ಳಲು ಈ ಜೀವಸತ್ವ ಅತಿ ಅಗತ್ಯ. ಇದರಿಂದ ಹಾಲಿನ ಇಳುವರಿ ಸುಧಾರಿಸುತ್ತದೆ, ಮೂಳೆಗಳು ಗಟ್ಟಿಯಾಗುತ್ತವೆ.
ಚರ್ಮದ ಆರೋಗ್ಯ ಉತ್ತಮವಾಗುತ್ತದೆ. ಬಿಸಿಲು ಹೆಚ್ಚಾದಾಗ ನೆರಳಲ್ಲಿ ಕಟ್ಟುವ ವ್ಯವಸ್ಥೆ ಮಾಡಬೇಕು. ಕೊಟ್ಟಿಗೆಯಲ್ಲೂ ಅಷ್ಟೆ. ಇಕ್ಕಟ್ಟಾಗಿ ಕಟ್ಟುವುದು, ಅವುಗಳಿಗೆ ತಿರುಗಲು, ಮಲಗಲು ಸರಿಯಾಗಿ ಜಾಗ ಇಲ್ಲದಿರುವುದು, ಹಾಯುವ ದನ, ಎಮ್ಮೆ ಯನ್ನು ಹತ್ತಿರದಲ್ಲಿ ಕಟ್ಟುವುದು, ಕುಡಿಯುವ ನೀರಿಗೆ ವ್ಯವಸ್ಥೆ ಮಾಡದಿರುವುದು, ಕಡಿಮೆ ಆಹಾರ ನೀಡುವುದು ಎಲ್ಲವೂ ಒತ್ತಡಕಾರಕಗಳೆ. ಸ್ವಚ್ಛವಾಗಿಲ್ಲದ ಜಾಗದಲ್ಲಿ ಜಾನುವಾರುಗಳನ್ನು ಕಟ್ಟುವುದರಿಂದಲೂ ಅವು ಹಿಂಸೆ ಅನುಭವಿಸುತ್ತವೆ.
ಸ್ವಚ್ಛತೆಯಿಲ್ಲದೆಡೆ ಕೆಚ್ಚಲು ಬಾವು, ಚರ್ಮದ ಕಾಯಿಲೆ ಸೇರಿದಂತೆ ರೋಗ ರುಜಿನಗಳ ಬಾಧೆ ಹೆಚ್ಚು. ವಾತಾವರಣದಲ್ಲಿ ಹಠಾತ್ ಬದಲಾವಣೆಯಾದಾಗ, ಗರ್ಭಾವಸ್ಥೆಯಲ್ಲಿ, ಕರು ಹಾಕಿದಾಗ, ಹಿಂಡಿನಿಂದ ಅಗಲಿಸಿದಾಗ, ಬೇರೆಡೆ ಸಾಗಣೆ ಮಾಡಿದಾಗಲೂ ಜಾನುವಾರುಗಳು ಒತ್ತಡವನ್ನು ಅನುಭವಿಸುತ್ತವೆ. ಆಗ ರಸದೂತಗಳ ಮಟ್ಟದಲ್ಲಿ ಏರುಪೇರಾಗುತ್ತದೆ. ಹಾಲಿನ ಇಳುವರಿ ಕುಸಿಯುತ್ತದೆ.
ದೇಹದ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಹೀಗಾದಾಗ ಶರೀರದಲ್ಲಿ ತಟಸ್ಥವಾಗಿರುವ ಅವಕಾಶವಾದಿ ರೋಗಾಣುಗಳು ಒಮ್ಮೆಲೇ ಸಂಖ್ಯೆಯಲ್ಲಿ ವೃದ್ಧಿಗೊಂಡು ಕಾಯಿಲೆಗಳನ್ನು ಹುಟ್ಟು ಹಾಕುತ್ತವೆ. ಆದ್ದರಿಂದ ರೈತರು ಜಾನುವಾರುಗಳು ಕೂಡ ಮನುಷ್ಯರಂತೆ ಸ್ವಚ್ಛತೆ ಬಯಸುತ್ತವೆ ಎಂಬದನ್ನು ಅರಿಯಬೇಕಿದೆ. ಜಾನುವಾರು ಸಾಕಾಣಿಕೆಯಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕಿದೆ.
 - 
