೫, ೮ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಸರಿಯಲ್ಲ
೫ ಮತ್ತು ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ನಿರ್ಧಾರದ ಕುರಿತು ಆಕ್ಷೇಪಗಳು ಕೇಳಿಬರುತ್ತಿವೆ.
ಕರ್ನಾಟಕ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮವನ್ನು ಓದುತ್ತಿರುವ ವಿದ್ಯಾರ್ಥಿ ಗಳಿಗೆ ಮಾತ್ರ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುತ್ತಿದೆ. ಸಿಬಿಎಸ್‌ಸಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಕೇಂದ್ರ ಸರಕಾರ ನಡೆಸುವ ಶಾಲೆಗಳಲ್ಲೂ ಪಬ್ಲಿಕ್ ಪರೀಕ್ಷೆಗಳನ್ನು ನಡೆಸು ವುದಿಲ್ಲ. ಇದು ವಿದ್ಯಾರ್ಥಿಗಳಲ್ಲೇ ತಾರತಮ್ಯವೆಸಗುವ ನಿರ್ಧಾರವಾಗಿದೆ.
ಅಲ್ಲದೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ೧೨ ರಂದು ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವ ಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
ವಿದ್ಯಾರ್ಥಿಗಳು ಬಾಕಿ ಉಳಿದಿರುವ ಎರಡು ತಿಂಗಳಲ್ಲೇ ಪಬ್ಲಿಕ್ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಕಷ್ಟಸಾಧ್ಯ. ಬಹುತೇಕ ಮಂದಿ ಪಾಲಕರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಅರಿವು ಮೂಡಿಸುವ ಪ್ರಯತ್ನವನ್ನು ಸಹ ಸರಕಾರ ಕೈಗೊಂಡಿಲ್ಲ. ಪ್ರಶ್ನೆ ಪತ್ರಿಕೆ ಹೇಗಿರುತ್ತದೆ ಎಂಬ ಯಾವುದೇ ಮಾಹಿತಿಯನ್ನೂ ವಿದ್ಯಾರ್ಥಿಗಳಿಗೆ ತಿಳಿಸಿಲ್ಲ.
ಬಹುತೇಕ ಶಿಕ್ಷಕರಿಗೂ ಪಬ್ಲಿಕ್ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿಕೊಡುವ ಕೌಶಲವಿಲ್ಲ. ೫ ಮತ್ತು ೮ನೇ ತರಗತಿ ವಿದ್ಯಾರ್ಥಿಗಳು ಪಬ್ಲಿಕ್ ಪರೀಕ್ಷೆಗಳನ್ನು ಎದುರಿಸುವಷ್ಟು ಮಾನಸಿಕವಾಗಿ ಸದೃಢರಾಗಿರುವುದಿಲ್ಲ.ಅಲ್ಲದೆ, ಪಬ್ಲಿಕ್ ಪರೀಕ್ಷೆಗಳು ಸಾಮಾನ್ಯವಾಗಿ ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ನಡೆಯುತ್ತವೆ. ದೂರದ ಕೇಂದ್ರಗಳಲ್ಲಿ ಪರೀಕ್ಷೆಗಳು ನಿಗದಿಪಡಿಸಿದರೆ ವಿದ್ಯಾರ್ಥಿಗಳಿಗೆ ಸಂಚಾರದ ತೊಂದರೆಯಾಗುತ್ತದೆ.
ರಾಜ್ಯದಲ್ಲಿ ಜಾರಿಯಾದ ರಾಷ್ಟ್ರೀಯ ಶಿಕ್ಷಣ ನೀತಿಯು ಇಡೀ ದೇಶಕ್ಕೆ ಉದಾರವಾದ ಮತ್ತು ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಆದರೆ ಶಿಕ್ಷಣ ಇಲಾಖೆಯ ಆದೇಶವು ಎನ್‌ಇಪಿಗೆ ವಿರುದ್ಧವಾಗಿದೆ. ಎನ್‌ಇಪಿ ಪ್ರಕಾರ ಒಂದೊಂದು ಶಿಕ್ಷಣ ಮಂಡಳಿಗೆ ಒಂದೊಂದು ರೀತಿಯಲ್ಲಿ ಪರೀಕ್ಷೆ ನಡೆಸುವಂತಿಲ್ಲ. ಹೀಗಾಗಿ ಇದು ವಿದ್ಯಾರ್ಥಿಗಳು ಮತ್ತು ಪಾಲಕರ ವಿರೋಧಿ ತೀರ್ಮಾನವಾಗಿದೆ.
ಆದ್ದರಿಂದ ಪಬ್ಲಿಕ್ ಪರೀಕ್ಷೆಯ ತೀರ್ಮಾನವು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ರಾಜ್ಯ ಸರಕಾರ ಕೂಡಲೇ ಇದನ್ನು ವಾಪಸ್ಸು ಪಡೆದು ಮೊದಲು ಇದ್ದ ರೀತಿಯಲ್ಲಿಯೇ ಪರೀಕ್ಷೆಗಳನ್ನು ನಡೆಸಬೇಕು.