ಗುರು-ಶಿಷ್ಯ ಪರಂಪರೆಗೆ ಮಸಿ ಬಳಿಯುತ್ತಿರುವ ವ್ಯವಸ್ಥೆ
ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನ ಹೊಂದಿರುವುದು ಭಾರತೀಯ ಸಂಸ್ಕೃತಿಯ ಗುರು-ಶಿಷ್ಯ ಪರಂಪರೆ. ಸಾವಿರಾರು ವರ್ಷಗಳಿಂದ ಅನೂಚಾನವಾಗಿ, ಯಾವುದೇ ಕುಂದಿ ಲ್ಲದೆ ನಡೆದು ಬಂದಿರುವ ಈ ವ್ಯವಸ್ಥೆ ಇತ್ತೀಚಿನ ವರ್ಷಗಳಲ್ಲಿ ಮಾತ್ರ ಅಲ್ಲಲ್ಲಿ ತಾಳ ತಪ್ಪುತ್ತಿದೆ, ಹದಗೆಡುತ್ತಿದೆ.
ಗುರುಗಳಿಗೆ ಅತ್ಯುನ್ನತ ಸ್ಥಾನ ನೀಡಿ ಗೌರವಿಸುವ ಪರಂಪರೆ ನಮ್ಮದು. ಅದೇ ರೀತಿ ಶಿಷ್ಯ ರನ್ನು ವಾತ್ಸಲ್ಯದಿಂದ ಕಂಡು ತಮ್ಮ ಜ್ಞಾನಧಾರೆಯನ್ನು ಸಂಪೂರ್ಣವಾಗಿ ಹರಿಸುವ ಗುರುಗಳು ನಮ್ಮವರು.
‘ಗುರುಬ್ರಹ್ಮ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ’ ಎನ್ನುವ ನಮ್ಮ ಆರ್ಷೇಯ ಪರಂಪರೆ ಯಿಂದ ಬಹಳಷ್ಟು ದೂರ ಸಾಗಿ ಬಂದಿರುವ ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಅದರಿಂದ ಹುಟ್ಟಿಕೊಂಡ ಸಾಮಾಜಿಕ ವ್ಯವಸ್ಥೆಗಳು ಗುರು-ಶಿಷ್ಯರ ಬಾಂಧವ್ಯವನ್ನು ಹಾಳುಗೆಡಹಿವೆ.
ಅದರ ಪರಿಣಾಮವೇ ಇಂದು ಅಲ್ಲಲ್ಲಿ ಕಂಡುಬರುವ ಅಪಸವ್ಯಗಳು, ದುಷ್ಕೃತ್ಯಗಳು. ಗುರುಗಳ ಮೇಲೆ ಹಲ್ಲೆ ನಡೆಸುವ ವಿದ್ಯಾರ್ಥಿಗಳು, ಅಂತೆಯೇ ವಿದ್ಯಾರ್ಥಿಗಳ ಮೇಲೆ ಅಮಾನುಷ ರೀತಿಯಲ್ಲಿ ಹಲ್ಲೆ ಅಥವಾ ಲೈಂಗಿಕ ದೌರ್ಜನ್ಯ ನಡೆಸುವ ಕೆಲವೇ ಮಂದಿ ದಾರಿತಪ್ಪಿದ ಶಿಕ್ಷಕರು ಸಮಾಜದ ಒಟ್ಟು ವ್ಯವಸ್ಥೆಯಲ್ಲಿ ಸನ್ನಡತೆ ಎಂಬುದು ಹಳಿ ತಪ್ಪಿದುದರ ಪ್ರತಿಬಿಂಬವಾಗಿದೆ.
ಕೆಲವೆಡೆ ಸಣ್ಣಪುಟ್ಟ ತಪ್ಪಿಗೂ ಎಳೆಯ ಮಕ್ಕಳ ಮೇಲೆ ಹೀನಾಯ ದೌರ್ಜನ್ಯ ಎಸಗುವ ಕುತ್ಸಿತ ಮನಸ್ಸಿನ ಶಿಕ್ಷಕ ಅಥವಾ ಶಿಕ್ಷಕಿ; ಅದೇ ರೀತಿ ವೈಯಕ್ತಿಕ ದ್ವೇಷ ಅಥವಾ ಯಾರದೋ ಕೈಗೊಂಬೆಗಳಾಗಿ ಶಿಕ್ಷಕರ ಮೇಲೆ ವೃಥಾ ಆರೋಪ ಹೊರಿಸಿ ಅವರ ತೇಜೋ ವಧೆ ಮಾಡುವುದು ಅಥವಾ ಅವರ ಸಾವಿಗೂ ಕಾರಣವಾಗುವಂತಹ ಘಟನೆಗಳು ದಿನನಿತ್ಯ ನಮ್ಮ ಸುತ್ತಮುತ್ತ ಸಂಭವಿಸುತ್ತಿರು ತ್ತವೆ.
ಎಳೆಯ ಮಗುವೊಂದು ತರಗತಿಯಲ್ಲಿ ಮೂತ್ರ ವಿಸರ್ಜನೆ ಮಾಡಿತೆಂದು ಶಿಕ್ಷಕಿಯೊಬ್ಬಳು ಅದರ ಮರ್ಮಾಂಗಕ್ಕೆ ಬೆಂಕಿ ಹಚ್ಚಿದ ಘಟನೆಯನ್ನು ಇತ್ತೀಚೆಗೆ ಓದಿದ್ದೇವೆ. ಮೊನ್ನೆ ಮೊನ್ನೆಯಷ್ಟೇ ಪಾಂಡವಪುರ ತಾಲೂಕಿನ ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ವಿದ್ಯಾರ್ಥಿನಿಯರು ಅಟ್ಟಾಡಿಸಿಕೊಂಡು ಹೋಗಿ ಸೌದೆ, ಬಡಿಗೆಗಳಿಂದ ಹೊಡೆದಿದ್ದಾರೆ. ಆತನ ಅನುಚಿತ ವರ್ತನೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ದೆಹಲಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯ್ಬೊಳು ೫ನೇ ತರಗತಿಯ ವಿದ್ಯಾರ್ಥಿನಿಯ ತಲೆಗೆ ಕತ್ತರಿ ಯಿಂದ ಹೊಡೆದು ಮಹಡಿಯಿಂದ ಕೆಳಕ್ಕೆ ಎಸೆದಿದ್ದಾಳೆ. ಇವೆಲ್ಲ ಗುರುಗಳೆನ್ನಿಸಿಕೊಂಡವರು ಮಾಡುವ ಕೃತ್ಯಗಳೇ? ಕಾನೂನು ಕ್ರಮಗಳಿಗಿಂತಲೂ ವಿವೇಕದಿಂದ ಯೋಚಿಸಬೇಕಾದ ಘಟನೆಗಳಿವು.
 - 