ಚುನಾವಣೆ ಸುಧಾರಣೆಯಲ್ಲಿ ಹೊಸ ಉಪಕ್ರಮ ಈ ಆರ್‌ವಿಎಂ
ಚುನಾವಣೆ ಪ್ರಕ್ರಿಯೆಗಳ ಸುಧಾರಣೆಯಲ್ಲಿ ಸದಾ ಕಾಲ ಮುಂಚೂಣಿಯಲ್ಲಿರುವ ಭಾರತೀಯ ಚುನಾವಣಾ ಆಯೋಗ ಇದೀಗ ಮತ್ತೊಂದು ಹೊಸ ಉಪಕ್ರಮಕ್ಕೆ ಮುಂದಾಗಿದೆ. ದಶಕಗಳ ಹಿಂದೆಯೇ ವಿದ್ಯುನ್ಮಾನ ಮತಯಂತ್ರಗಳನ್ನು ಪರಿಚಯಿಸಿಪಾರದರ್ಶಕ ಚುನಾವಣೆ ವಿಧಾನಗಳನ್ನು ಆರಂಭಿಸಿದ್ದ ಆಯೋಗವು ಇದೀಗ ರಿಮೋಟ್ ವೋಟಿಂಗ್ ಮೆಷೀನ್ (ಆರ್‌ವಿಎಂ) ಅನ್ನು ಪರಿಚಯಿಸಲು ಮುಂದಾಗಿದೆ.
ಈ ಸಂಬಂಧ ಜನವರಿ ೧೬ರಂದು ಪ್ರಮುಖ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಸಮ್ಮುಖದಲ್ಲಿ ಪ್ರಾತ್ಯಕ್ಷಿಕೆ ನಡೆಸಲು ಆಯೋಗ ಮುಂದಾಗಿದೆ. ಈ ಯಂತ್ರದ ಪ್ರಾತ್ಯಕ್ಷಿಕೆ ವೇಳೆ ಯಾವುದಾದರೂ ಆಕ್ಷೇಪಗಳು ಬಂದಲ್ಲಿ ಅವುಗಳನ್ನು ಬಗೆಹರಿಸಿ ಶೀಘ್ರವೇ ಚುನಾವಣೆ ಪ್ರಕ್ರಿಯೆಯಲ್ಲಿ ಈ ಯಂತ್ರ ಗಳನ್ನು ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ. ದೂರ ನಿಯಂತ್ರಿತ ವಿದ್ಯುನ್ಮಾನ ಮತಯಂತ್ರ ಇದಾಗಿದ್ದು, ವಲಸೆ ಕಾರ್ಮಿಕರು ಮತ್ತು ತಮ್ಮ ಮೂಲ ಸ್ಥಳದಿಂದ ದೂರ ಇರುವ ಮತದಾರರಿಗೆ ತಾವಿರುವ ಸ್ಥಳದಿಂದಲೇ ಮತ ಚಲಾಯಿಸಲು ಅವಕಾಶ ಮಾಡಿಕೊಡುವ ವಿನೂತನ ಉಪಕ್ರಮವಾಗಿದೆ.
ಈ ಮೂಲಕ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಹೆಚ್ಚು ಹೆಚ್ಚು ಜನರು ಭಾಗಿಯಾಗುವಂತೆ ಮಾಡುವುದು ಉದ್ದೇಶವಾಗಿದೆ. ವಿದ್ಯುನ್ಮಾನ ಮತಯಂತ್ರಗಳ ಸುಧಾರಿತ ಆವೃತ್ತಿ ಇದಾಗಿದ್ದು, ಆಯೋಗದ ಮಾಹಿತಿ ಪ್ರಕಾರ, ಒಂದು ದೂರನಿಯಂತ್ರಿತ ಮತಯಂತ್ರದ ಮೂಲಕ ೭೨ ವಿಧಾನಸಭಾ ಕ್ಷೇತ್ರಗಳ ಮತದಾರರನ್ನು ನಿರ್ವಹಿಸಬಹುದಾಗಿದೆ. ಇಂಟರ್ನೆಟ್ ಸಂಪರ್ಕವಿಲ್ಲದೆ ಕಾರ್ಯನಿರ್ವಹಿಸುವ ಈ ಯಂತ್ರದಲ್ಲಿ ಯಾವುದೇ ಲೋಪವಿಲ್ಲ ಎಂದು ಮೂಲಗಳು ಹೇಳಿವೆ.
ಆದರೂ ಅದನ್ನು ಮತ್ತೆ ಮತ್ತೆ ಪರೀಕ್ಷಿಸಿ ಬಳಕೆಗೆ ಸಜ್ಜುಗೊಳಿಸುವ ವಿಧಾನಕ್ಕೆ ಚುನಾವಣೆ ಆಯೋಗ ಮುಂದಾಗಿರುವುದು ಸ್ವಾಗತಾರ್ಹ. ಮತಗಟ್ಟೆಗಳಿಂದ ವಿಮುಖವಾಗುವ ಒಂದು ವರ್ಗದ ಯುವ ಸಮೂಹವನ್ನು ಈ ಮೂಲಕವಾದರೂ ಚುನಾವಣೆ ಪ್ರಕ್ರಿಯೆಯತ್ತ ಸೆಳೆದು ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಕ್ರಿಯೆಗೆ ಆಯೋಗ ಮುಂದಾಗಿದೆ. ಅಂತಿಮವಾಗಿ ಈ ಆರ್‌ವಿಎಂ (ರಿಮೋಟ್ ವೋಟಿಂಗ್ ಮೆಷೀನ್) ಅನ್ನು ಚುನಾವಣೆಯಲ್ಲಿ ಬಳಸಬೇಕಾದರೆ ಸಾಕಷ್ಟು ಕಾನೂನು ಅಡೆತಡೆಗಳಿವೆ ಮತ್ತು ತಾಂತ್ರಿಕ ಸವಾಲುಗಳನ್ನೂ ಬಗೆಹರಿಸಬೇಕಾಗಿದೆ. ಏನೇ ಆದರೂ ಆರ್‌ವಿಎಂನ ಹೊಸ ಪ್ರಯೋಗವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಲು ಭಾರತೀಯರು ಹಿಂಜರಿಯಬೇಕಿಲ್ಲ.