ಸಮ್ಮೇಳನಾಧ್ಯಕ್ಷರ ಭಾಷಣ ಇರಬೇಕಿರುವುದೇ ಹೀಗೆ!
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ಸರಕಾರಕ್ಕೆ ಮುಜುಗರವಾಗುವ ಒಂದೆರೆಡು ಅಂಶಗಳಿವೆ ಎಂಬ ಚರ್ಚೆ ಆರಂಭವಾಗಿದೆ. ಹೌದು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನಗಳು ನಡೆಯುವುದೇ ಆಳುವ ಸರಕಾರಗಳನ್ನು ಕಾಲಕಾಲಕ್ಕೆ ಭಾಷೆ ಮತ್ತು ನೆಲ, ಜಲದ ಕುರಿತು ಎಚ್ಚರಿಸಲು. ಇಂತಹ ಎಚ್ಚರಿಕೆಯ ಸಂದೇಶಗಳು ಬಹುತೇಕ ಸಾಹಿತ್ಯ ಸಮ್ಮೇಳನಗಳಲ್ಲಿ ವ್ಯಕ್ತವಾಗುತ್ತಲೇ ಇವೆ.
ಅದರಂತೆಯೇ ಈ ಸಲದ ಸಮ್ಮೇಳನಾಧ್ಯಕ್ಷರು ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರಕಾರವಿದ್ದರೂ ಕನ್ನಡಕ್ಕೆ ಅನ್ಯಾಯ ವಾಗುತ್ತಿದೆ. ತಮಿಳು ಭಾಷೆಗೆ ನೀಡಿದ ಶಾಸೀಯ ಸ್ಥಾನಮಾನದಷ್ಟು ಮಾನ್ಯತೆಯ ಲಾಭವನ್ನು ಕನ್ನಡ ಶಾಸ್ತ್ರೀಯ ಭಾಷೆಯಾಗಿದ್ದರೂ ನೀಡಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಸರಕಾರಕ್ಕೆ ಮುಜುಗರ ವನ್ನುಂಟು ಮಾಡಿರಬಹುದು, ಆದರೆ, ಬಹುತೇಕ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಸಮ್ಮೇಳನದ ವೇದಿಕೆಯಲ್ಲಿ ಆಯಾ ಸರಕಾರದ ಮುಖ್ಯಸ್ಥರನ್ನು ಕೂರಿಸಿಕೊಂಡು, ಇದಕ್ಕಿಂತಲೂ ಖಾರ ವಾದ ಹೇಳಿಕೆಗಳನ್ನು ನೀಡಿದ್ದಾರೆ.
ಭಾಷೆ ವಿಚಾರದಲ್ಲಿ ನೀವು ಇರಬೇಕಿರುವುದು ಹೀಗೆಯೇ ಎಂದು ಎಚ್ಚರಿಸಿ ದ್ದಾರೆ. ಜತೆಗೆ, ನಾಡು, ನುಡಿ, ನೆಲ, ಜಲದ ವಿಚಾರ ಬಂದರೆ ನಾವು ಆಳುವ ಸರಕಾರಕ್ಕೆ ಸಲಾಂ ಹೊಡೆಯುವುದಿಲ್ಲ. ಸರಕಾರವನ್ನು ಎಚ್ಚರಿಸಿ, ಬುದ್ಧಿ ಹೇಳುತ್ತೇವೆ. ಸಾಧ್ಯವಾದರೆ ಹೋರಾಟಕ್ಕೂ ಸಿದ್ಧ ಎಂದು ಸಾರುವುದು ಸಾಹಿತ್ಯ ವಲಯದ ನಡೆಯಾಗಿರಬೇಕು. ಅಂತಹದ್ದೇ ನಡೆಯನ್ನು ಸಮ್ಮೇಳನಾಧ್ಯಕ್ಷರು ಮಾಡಿದ್ದಾರೆ.
ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸರಕಾರದ ನಡುವಿನ ಸಮನ್ವಯತೆಗಾಗಿ, ಸವಲತ್ತಿಗಾಗಿ ಅಥವಾ ಇನ್ನಿತರ ಮುಲಾಜಿಗೆ ಒಳಗಾಗಿ ಕೆಲವು ವಿಚಾರಗಳಲ್ಲಿ ರಾಜಿಯಾಗಬಹುದು. ಆದರೆ, ಸಮ್ಮೇಳನಾಧ್ಯಕ್ಷರು ಇಂತಹ ಯಾವುದೇ ಮುಲಾಜಿಗೆ ಒಳಗಾಗಬೇಕಾದ ಅಗತ್ಯವಿಲ್ಲ ಎಂಬುದನ್ನು ದೊಡ್ಡರಂಗೇಗೌಡರು ಸಾಭೀತು ಮಾಡಿದ್ದಾರೆ. ಈ ಹಿಂದಿನ ಬಹುತೇಕ ಸಮ್ಮೇಳನಾಧ್ಯಕ್ಷರು ಸರಕಾರವನ್ನು ಎಚ್ಚರಿಸಿದ ರೀತಿಯಲ್ಲಿಯೇ ಎಚ್ಚರಿಸಿದ್ದಾರೆ.
ಇಂತಹ ವಿಚಾರದಲ್ಲಿ ಭಾಷೆಯ ಪರವಾಗಿ ನಡೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಒತ್ತಾಯ ಪ್ರತಿ ಕನ್ನಡಿಗರ ಒತ್ತಾಯವೂ ಕೂಡ ಆಗಿದೆ. ಈ ನಿಟ್ಟಿನಲ್ಲಿ ಸಮ್ಮೇಳನಾಧ್ಯಕ್ಷರ ಮಾತನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಅದನ್ನು ಟೀಕಿಸುವ ಸರಕಾರದ ಪರವಾದ ಕೆಲ ಮನಸುಗಳಿಗೆ ಯಾರೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ಇನ್ನು ಮುಂದಿನ ಸಮ್ಮೇಳನದ ಯಶಸ್ಸು, ಅದರಿಂದ ಕನ್ನಡ ಭಾಷೆ, ಸಾಹಿತ್ಯಕ್ಕೆ ಸಿಗುವ ಲಾಭವಷ್ಟೇ ಇಲ್ಲಿ ಮುಖ್ಯವಾಗುತ್ತದೆ. ಇದರ ಕಡೆಗೆ ಸರಕಾರವೂ ಗಮನ ಹರಿಸಬೇಕು.
ಸಾಧ್ಯವಾದರೆ, ಯಾವುದೇ ಪಕ್ಷವಿರಲಿ, ಕೇಂದ್ರ ಸರಕಾರವನ್ನು ಈ ನಿಟ್ಟಿನಲ್ಲಿ ಒತ್ತಾಯಿಸಿ ನಮ್ಮ ನುಡಿಗೆ ಒಳಿತಾಗುವಂತೆ ಮಾಡುವ ಪ್ರಯತ್ನ ಮಾಡಬೇಕು.